ʻಕಾಂತಾರʼ ಚಿತ್ರದ ಚಾಮುಂಡಿ ದೈವದ ಪಾತ್ರವನ್ನು ಅವಹೇಳನ ಮಾಡಿದ ಆರೋಪದ ಬೆನ್ನಲ್ಲೇ ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ (Chamundeshwari Temple) ಭೇಟಿ ನೀಡಿ, ತಾಯಿಯ ಸನ್ನಿಧಿಯಲ್ಲಿ ಕ್ಷಮೆಯಾಚಿಸಿದ್ದಾರೆ.
ಯಾರಿಗೂ ತಿಳಿಯದಂತೆ ಮೈಸೂರಿಗೆ ಆಗಮಿಸಿದ ರಣವೀರ್ ಸಿಂಗ್, ಚಾಮುಂಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ದೇವಿಯ ಎದುರು ತಲೆಬಾಗಿ ಪ್ರಾರ್ಥನೆ ಸಲ್ಲಿಸಿರುವುದು ತಿಳಿದುಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದ ವೇಳೆ, ರಣವೀರ್ ಸಿಂಗ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದರು. ಜೊತೆಗೆ ಸ್ವತಃ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಪ್ರಾಯಶ್ಚಿತ್ತ ಮಾಡುವುದಾಗಿ ಭರವಸೆ ನೀಡಿದ್ದರು.
ಏನಿದು ವಿವಾದ?
ಗೋವಾದಲ್ಲಿ ನಡೆದ ಫಿಲ್ಮ್ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ನಟ ರಿಷಬ್ ಶೆಟ್ಟಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದ ರಣವೀರ್ ಸಿಂಗ್, ʻಕಾಂತಾರʼ ಸಿನಿಮಾದ ಕುರಿತು ಮಾತನಾಡುವ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.
“ನಾನು ʻಕಾಂತಾರʼ ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡಿದ್ದೇನೆ. ರಿಷಬ್ ಶೆಟ್ಟಿ ಅವರ ಅಭಿನಯ ಅದ್ಭುತ. ಅದರಲ್ಲೂ ದೈವ ಮೈಮೇಲೆ ಬರುತ್ತಿರುವ ದೃಶ್ಯ ತುಂಬಾ ಇಷ್ಟವಾಯಿತು” ಎಂದು ಹೇಳುತ್ತಾ, ಆ ದೃಶ್ಯವನ್ನು ಅನುಕರಣೆ ಮಾಡಿ ತೋರಿಸಿದ್ದರು.
ರಣವೀರ್ ಸಿಂಗ್ ಅವರ ಈ ನಡೆ ದೈವಾರಾಧಕರ ಭಾವನೆಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.