ಬೆಂಗಳೂರು: ಒಂದು ಕಡೆ ಮನೆ ಕೆಲಸದವ್ರೇ ಮಾಹಿತಿ ಲೀಕ್ ಮಾಡಿ ಮನೆ ಕಳ್ಳತನಕ್ಕೆ ಸಹಕರಿಸಿದ ಪ್ರಕರಣ ಬೆಳಕಿಗೆ ಬಂದಿದ್ದರೆ, ಮತ್ತೊಂದು ಕಡೆ ರಾತ್ರಿಯೇ ಬೆಂಗಳೂರಿಗೆ ಬಂದು ಕಳ್ಳತನ ಮಾಡಿ ಬೆಳಿಗ್ಗೆ ಮದ್ದೂರಿಗೆ ಪರಾರಿಯಾಗುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇತ್ತ ಜ್ಯೂಸ್ ಅಂಗಡಿಯಲ್ಲಿ ಹೈಡ್ರೋ ಗಾಂಜಾ ಮಾರಾಟ ಮಾಡುತ್ತಿದ್ದವರನ್ನು ಕೂಡ ಅರೆಸ್ಟ್ ಮಾಡಲಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಹೈಡ್ರೋ ಗಾಂಜಾ ಹಾವಳಿ ಹೆಚ್ಚಾಗಿದ್ದು, ಪೊಲೀಸರು ನಿರಂತರವಾಗಿ ಡ್ರಗ್ ಜಾಲದ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ.
ಮಲ್ಲೇಶ್ವರಂ ಪೊಲೀಸರು ಕೇರಳ ಮೂಲದ ಮೊಹಮ್ಮದ್ ಅಫ್ರನ್, ಸಬೀತ್ ಮತ್ತು ಶ್ರೀನಾಥ್ ಎಂಬ ಮೂವರು ಪೆಡ್ಲರ್‌ಗಳನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿ 464 ಗ್ರಾಂ ಹೈಡ್ರೋ ಗಾಂಜಾ ವಶಪಡಿಸಿಕೊಂಡಿದ್ದಾರೆ. ಜ್ಯೂಸ್ ಅಂಗಡಿ ನಡೆಸುತ್ತಿದ್ದ ಆರೋಪಿಗಳು ಗ್ರಾಹಕರ ನೆಪದಲ್ಲಿ ಡ್ರಗ್ಸ್ ಪೂರೈಕೆ ಮಾಡುತ್ತಿದ್ದರು.
ಇತ್ತ ಅಶೋಕನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕೇರಳದಿಂದ ರಸ್ತೆ ಮಾರ್ಗದ ಮೂಲಕ ಬೆಂಗಳೂರಿಗೆ ಡ್ರಗ್ಸ್ ಸಾಗಿಸುತ್ತಿದ್ದ ಮೊಹಮ್ಮದ್ ಹಮ್ಜಾ ಮತ್ತು ಯಾಸೀರ್ ಅಹಮದ್ ಅನ್ನು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 1 ಕೋಟಿ 5 ಲಕ್ಷ ರೂಪಾಯಿ ಮೌಲ್ಯದ 3 ಕೆಜಿ 222 ಗ್ರಾಂ ಹೈಡ್ರೋ ಗಾಂಜಾ ಜಪ್ತಿ ಮಾಡಲಾಗಿದೆ.
ಇನ್ನೊಂದೆಡೆ, ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದು ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡಿದ್ದ ರಾಜಸ್ಥಾನ ಮೂಲದ ಗ್ಯಾಂಗ್ ಕೆ.ಆರ್ ಪುರಂ ಪೊಲೀಸರ ಬಲೆಗೆ ಬಿದ್ದಿದೆ. ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಗೋಪಾಲ್ ಮತ್ತು ನಾಗೇಂದ್ರ ಸಹಾನಿ ರಾತ್ರಿ ವೇಳೆ ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ಮನೆ ಕೆಲಸದವ್ರಿಂದ ಮನೆ ಖಾಲಿ ಇದೆ ಎಂಬ ಮಾಹಿತಿ ಪಡೆದು ಕಳ್ಳತನ ಮಾಡುತ್ತಿದ್ದ ಈ ಗ್ಯಾಂಗ್‌ನಿಂದ 40 ಲಕ್ಷ ರೂ. ಮೌಲ್ಯದ 196 ಗ್ರಾಂ ಚಿನ್ನ ಹಾಗೂ 1 ಕೆಜಿಗೂ ಅಧಿಕ ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ.
ಇನ್ನೊಂದೆಡೆ ಮದ್ದೂರಿನಿಂದ ಪ್ರತಿದಿನ ಸಂಜೆ ಬೆಂಗಳೂರಿಗೆ ಬಂದು ರಾತ್ರಿ ಮನೆಗಳ್ಳತನ ಮಾಡಿ ಬೆಳಿಗ್ಗೆ ಊರಿಗೆ ಮರಳುತ್ತಿದ್ದ ಮಹೇಶ್ ಗೌಡ @ ಆನಂದ್ ಎಂಬ ಆರೋಪಿಯನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ. ಮೋಜು-ಮಸ್ತಿಗಾಗಿ ಕಳ್ಳತನ ಮಾಡುತ್ತಿದ್ದ ಈತನಿಂದ 317 ಗ್ರಾಂ ಚಿನ್ನ ಹಾಗೂ 2.5 ಕೆಜಿ ಬೆಳ್ಳಿ ವಶಪಡಿಸಿಕೊಂಡಿದ್ದು, ಇನ್ಸ್‌ಪೆಕ್ಟರ್ ಪಾಪಣ್ಣ ತಂಡ ತನಿಖೆ ಮುಂದುವರಿಸಿದೆ.
ಜಿಂಕೆ ಕೊಂಬು ಮಾರಾಟಕ್ಕೆ ಯತ್ನ:
ಇತ್ತ ತುಮಕೂರಿನಿಂದ ಬೆಂಗಳೂರಿಗೆ ಜಿಂಕೆ ಕೊಂಬುಗಳನ್ನು ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದ ಮುರಳಿ, ಮಂಜುನಾಥ್ ಮತ್ತು ಕಾರ್ಯಪ್ಪ ಎಂಬವರನ್ನು ಸಿಸಿಬಿ ಹಾಗೂ ಚಿಕ್ಕಬಾಣಾವಾರ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಜಿಂಕೆ ಕೊಂಬುಗಳನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಆರಂಭಿಸಿದ್ದಾರೆ.