ದಾವಣಗೆರೆ: ಹರಿಹರ ಪಂಚಮಸಾಲಿ ಪೀಠದಲ್ಲಿ (Panchamasali Peetha) ದಿನೇ ದಿನೇ ಸ್ವಾಮೀಜಿ (ವಚನಾನಂದ ಸ್ವಾಮೀಜಿ) ಬೆಂಬಲಿಗರು ಹಾಗೂ ಟ್ರಸ್ಟಿಗಳ ನಡುವಿನ ಸಂಘರ್ಷ ಹೆಚ್ಚುತ್ತಿದ್ದು, ಪರಿಸ್ಥಿತಿ ಗಂಭೀರ ಸ್ವರೂಪ ಪಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಮಠದ ಆವರಣದಲ್ಲಿ ಸಭೆ, ಸಮಾರಂಭ ನಡೆಸುವುದನ್ನು ನಿಷೇಧಿಸುವಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಮಾ.10ರಿಂದ ಮಠದಲ್ಲಿ ಎರಡು ಗುಂಪುಗಳ ಬೆಂಬಲಿಗರಿಂದ ಪ್ರತ್ಯೇಕವಾಗಿ ಸಭೆ, ಸಮಾರಂಭ ಹಾಗೂ ಸುದ್ದಿಗೋಷ್ಠಿಗಳು ನಡೆಯುತ್ತಿದ್ದು, ಇವುಗಳು ಕ್ರಮೇಣ ಉದ್ವಿಗ್ನತೆಗೆ ತಿರುಗಿವೆ. ಗಲಾಟೆಗಳು ಮತ್ತು ಪ್ರಚೋದನಕಾರಿ ಹೇಳಿಕೆಗಳು ಹೆಚ್ಚಾಗುತ್ತಿರುವುದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗಿದೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗೂ ಹಾನಿ ಸಂಭವಿಸುವ ಸಾಧ್ಯತೆ ಕಂಡುಬಂದಿದೆ. ಈ ಕಾರಣದಿಂದ ಪೊಲೀಸ್ ಇಲಾಖೆಗೆ ನಿರಂತರ ಭದ್ರತೆ ಒದಗಿಸುವುದು ಕಷ್ಟವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಪಂಚಮಸಾಲಿ ಪೀಠದಲ್ಲಿ ಯಾವುದೇ ಸಭೆ, ಸಮಾರಂಭ ಅಥವಾ ಪತ್ರಿಕಾ ಗೋಷ್ಠಿ ನಡೆಸದಂತೆ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿದೆ. ಸ್ವಾಮೀಜಿ, ಟ್ರಸ್ಟಿಗಳು ಹಾಗೂ ಅವರ ಬೆಂಬಲಿಗರಿಗೆ ಈ ಕುರಿತು ನೋಟಿಸ್ ಜಾರಿಗೊಳಿಸಲಾಗಿದ್ದು, ಮೇ 1ರಿಂದ ಮೇ 30ರವರೆಗೆ ಈ ನಿಷೇಧಾಜ್ಞೆ ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ.
ಇದೇ ವೇಳೆ ಇಂದು (ಮೇ 5) ಟ್ರಸ್ಟಿಗಳ ವಿರುದ್ಧ ಸ್ವಾಮೀಜಿ ಬೆಂಬಲಿಗರು ‘ಲೆಕ್ಕಕೊಡಿ ಅಭಿಯಾನ’ ನಡೆಸಲು ಮುಂದಾಗಿದ್ದರು. ಏ.27ರಂದು ಟ್ರಸ್ಟಿಗಳು ತಪ್ಪು ಲೆಕ್ಕ ನೀಡಿದ್ದು, ಪಾರದರ್ಶಕ ಲೆಕ್ಕಪತ್ರ ಮಂಡಿಸಬೇಕು ಎಂದು ಅವರು ಆಗ್ರಹಿಸುತ್ತಿದ್ದರು. ಜೊತೆಗೆ ಹಳ್ಳಿಹಳ್ಳಿಗೂ ತೆರಳಿ ಭಕ್ತರು ನೀಡಿದ ಕಾಣಿಕೆಗಳ ವಿವರ ಸಂಗ್ರಹಿಸಲು ಕೂಡ ಬೆಂಬಲಿಗರು ಯೋಜನೆ ಹಾಕಿಕೊಂಡಿದ್ದರು. ನಿಷೇಧಾಜ್ಞೆ ಇದ್ದರೂ ಸಹ ಸ್ವಾಮೀಜಿ ಬೆಂಬಲಿಗರು ಸಭೆ ನಡೆಸಲು ಯತ್ನಿಸಿದ ಘಟನೆಗಳು ವರದಿಯಾಗಿವೆ.