ಶಿವಮೊಗ್ಗ: ಜಿಲ್ಲೆಯ (Shivamogga) ಹಲವೆಡೆ ಮರಳು ಹಾಗೂ ಕ್ವಾರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು (Lokayukta Raids), ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಂಗ್ರಹದ ಬಗ್ಗೆ ತೀವ್ರ ಪರಿಶೀಲನೆ ನಡೆಸಿದ್ದಾರೆ. ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಣೆ ಸಂಬಂಧ ನಿರಂತರವಾಗಿ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ, ಸಾಗರ, ತೀರ್ಥಹಳ್ಳಿ, ಭದ್ರಾವತಿ, ನಿಂಬೆಗೊಂದಿ, ಮಂಗೋಟೆ, ಸನ್ಯಾಸಿ ಕೊಡಮಗ್ಗಿ, ಹಾಡೋನಹಳ್ಳಿ, ಕೂಡಲಿ, ಮಂಡುವಳ್ಳಿ, ತೂದೂರು, ದಬ್ಬಣಗದ್ದೆ ಸೇರಿದಂತೆ ಹೊಸನಗರ ತಾಲೂಕಿನ ಹರಿದ್ರಾವತಿ, ಸಂಪಕಟ್ಟೆ ಹಾಗೂ ಸಾಗರದ ಆವಿನಹಳ್ಳಿಯ ಕ್ವಾರಿಗಳ ಮೇಲೆ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಮರಳು ಕ್ವಾರಿಗಳ ಜೊತೆಗೆ ಶಿವಮೊಗ್ಗದ ಕುವೆಂಪುನಗರದಲ್ಲಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆ ಕಚೇರಿಯ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಅಲ್ಲಿ ನಡೆದಿರುವ ಕಾರ್ಯಚಟುವಟಿಕೆಗಳ ಕುರಿತು ಸಮಗ್ರ ಪರಿಶೀಲನೆ ನಡೆಸುತ್ತಿದ್ದಾರೆ.
ಈ ದಾಳಿಯಲ್ಲಿ ಶಿವಮೊಗ್ಗ ಹಾಗೂ ಚಿತ್ರದುರ್ಗದ ಲೋಕಾಯುಕ್ತ ಅಧಿಕಾರಿಗಳು ಭಾಗವಹಿಸಿದ್ದು, ಮರಳು ಗಣಿಗಾರಿಕೆ ಹಾಗೂ ಸಾಗಾಟಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ಮುಂದುವರಿಸಿದ್ದಾರೆ.
ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲೂ ಅಕ್ರಮ ಮರಳು ಸಾಗಾಟದ ವಿಷಯ ಚರ್ಚೆಗೆ ಬಂದಿತ್ತು. ಅದೇ ಹಿನ್ನೆಲೆ ಹಾಗೂ ವ್ಯಾಪಕ ದೂರುಗಳ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಈ ಬೃಹತ್ ದಾಳಿ ನಡೆಸಿದ್ದಾರೆ.