ಭೋಪಾಲ್: ಇದು ಸಿನಿಮಾದ ಕಥೆಯಲ್ಲ, ಮಧ್ಯಪ್ರದೇಶದ ಸತ್ನಾದಲ್ಲಿ ನಡೆದ ನೈಜ ಘಟನೆ. ಸತ್ನಾ ಕೇಂದ್ರ ಕಾರಾಗೃಹದಲ್ಲಿ ಸಹಾಯಕ ಜೈಲರ್ ಆಗಿ ಸೇವೆ ಸಲ್ಲಿಸುತ್ತಿದ್ದ ಫಿರೋಜಾ ಖಾತೂನ್ ಎಂಬ ಮಹಿಳಾ ಅಧಿಕಾರಿ, ಅದೇ ಜೈಲಿನಲ್ಲಿ ಕೊಲೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಧರ್ಮೇಂದ್ರ ಸಿಂಗ್ ಅವರನ್ನು ಪ್ರೀತಿಸಿ, ಬಳಿಕ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದು, ಈ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ.
ಧರ್ಮೇಂದ್ರ ಸಿಂಗ್ 2007ರಲ್ಲಿ ಚಂದ್ಲಾ ಪ್ರದೇಶದ ಮುನ್ಸಿಪಲ್ ಕೌನ್ಸಿಲ್ ಉಪಾಧ್ಯಕ್ಷ ಕೃಷ್ಣ ದತ್ ದೀಕ್ಷಿತ್ ಹತ್ಯೆ ಪ್ರಕರಣದಲ್ಲಿ ಅಪರಾಧಿಯಾಗಿ ತೀರ್ಪುಗೊಂಡಿದ್ದು, ಸತ್ನಾ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು.
ಇನ್ನೊಂದೆಡೆ, ಫಿರೋಜಾ ಖಾತೂನ್ ಅವರು ಅದೇ ಕಾರಾಗೃಹದಲ್ಲಿ ಸಹಾಯಕ ಜೈಲು ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರಿಗೆ ವಾರಂಟ್ ವಿಭಾಗದ ಜವಾಬ್ದಾರಿ ನೀಡಲಾಗಿತ್ತು.
ಕರ್ತವ್ಯದ ನಿಮಿತ್ತ ಆರಂಭವಾದ ಪರಿಚಯ, ನಂತರ ಸ್ನೇಹವಾಗಿ, ಕೊನೆಗೆ ಪ್ರೀತಿಗೆ ತಿರುಗಿದೆ ಎಂದು ಜೈಲು ಮೂಲಗಳು ತಿಳಿಸಿವೆ. ಸುಮಾರು 14 ವರ್ಷಗಳ ಶಿಕ್ಷೆಯ ಬಳಿಕ ಉತ್ತಮ ನಡವಳಿಕೆ ಆಧಾರದಲ್ಲಿ ಧರ್ಮೇಂದ್ರ ಸಿಂಗ್ ಬಿಡುಗಡೆಗೊಂಡಿದ್ದು, ಬಳಿಕ ಇಬ್ಬರೂ ವಿವಾಹವಾಗಲು ತೀರ್ಮಾನಿಸಿದ್ದಾರೆ.
ಮೇ 5ರಂದು ಛತ್ತರ್‌ಪುರ ಜಿಲ್ಲೆಯ ಲವಕುಶ್ ನಗರದಲ್ಲಿ ಹಿಂದೂ ವಿಧಿ ವಿಧಾನಗಳಂತೆ ಇವರ ಮದುವೆ ನೆರವೇರಿದೆ. ಆದರೆ ಫಿರೋಜಾ ಖಾತೂನ್ ಅವರ ಕುಟುಂಬ ಈ ಮದುವೆಗೆ ವಿರೋಧ ವ್ಯಕ್ತಪಡಿಸಿದೆ ಎನ್ನಲಾಗಿದೆ.
ಕುಟುಂಬ ಸದಸ್ಯರು ಭಾಗವಹಿಸದ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ರಾಜ್ ಬಹದ್ದೂರ್ ಮಿಶ್ರಾ ಹಾಗೂ ಅವರ ಪತ್ನಿ ಕನ್ಯಾದಾನ ನೆರವೇರಿಸಿದರು. ಮದುವೆಯಲ್ಲಿ ಬಜರಂಗ ದಳದ ಕಾರ್ಯಕರ್ತರೂ ಭಾಗವಹಿಸಿದ್ದು, ಜೈಲು ಸಿಬ್ಬಂದಿ ಮತ್ತು ಸಹ ಕೈದಿಗಳು ನವ ದಂಪತಿಗಳಿಗೆ ಶುಭಾಶಯ ಕೋರಿದ್ದಾರೆ.