ಚಂಡೀಗಢ: ಅಮೃತಸರ ಕಂಟೋನ್ಮೆಂಟ್ (Amritsar cantonment) ಹಾಗೂ ಜಲಂಧರ್‌ನಲ್ಲಿರುವ ಗಡಿ ಭದ್ರತಾ ಪಡೆ (BSF) ಪ್ರಧಾನ ಕಚೇರಿಯ ಬಳಿ ಭಾರೀ ಸ್ಫೋಟಗಳು ಸಂಭವಿಸಿವೆ. ಮಂಗಳವಾರ ರಾತ್ರಿ 10:50ರ ಸುಮಾರಿಗೆ ಅಮೃತಸರದ ಖಾಸ್ಸಾ ಕಂಟೋನ್ಮೆಂಟ್ ಮತ್ತು ಜಲಂಧರ್‌ನಲ್ಲಿರುವ BSF ಪ್ರಧಾನ ಕಚೇರಿ ಹೊರಭಾಗದಲ್ಲಿ ಸ್ಫೋಟಗಳು ನಡೆದಿದ್ದು, ಘಟನೆಯಲ್ಲಿ ಯಾವುದೇ ಸಾವು–ನೋವು ಸಂಭವಿಸಿಲ್ಲ.
ಜಲಂಧರ್‌ನಲ್ಲಿ ಸ್ಕೂಟರ್ ಬೆಂಕಿಗೆ ಆಹುತಿಯಾದ ಪರಿಣಾಮ ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡಿದೆ ಎಂದು ಪೊಲೀಸರು ಆರಂಭದಲ್ಲಿ ತಿಳಿಸಿದ್ದರು. ಆದರೆ ಬಳಿಕ ಎರಡೂ ಸ್ಥಳಗಳಲ್ಲಿ ಸಂಭವಿಸಿದ ಸ್ಫೋಟಗಳಲ್ಲಿ IED (Improvised Explosive Device) ಬಳಸಿರುವ ಶಂಕೆ ವ್ಯಕ್ತವಾಗಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್ಪಿ ಆದಿತ್ಯ ಎಸ್. ವಾರಿಯರ್, ಶಂಕಿತ ಸ್ಫೋಟದ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತ ತಕ್ಷಣ ಹಿರಿಯ ಅಧಿಕಾರಿಗಳು ಹಾಗೂ ಸೇನಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ ಎಂದು ತಿಳಿಸಿದ್ದಾರೆ. ಕಂಟೋನ್ಮೆಂಟ್ ಪ್ರದೇಶದಲ್ಲಿ ಬಾಂಬ್ ನಿಷ್ಕ್ರಿಯ ದಳ ಮತ್ತು ವಿಧಿವಿಜ್ಞಾನ ಪ್ರಯೋಗಾಲಯ (FSL) ತಂಡಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಸಾಕ್ಷ್ಯಗಳನ್ನು ಸಂಗ್ರಹಿಸಿವೆ.
ಮಂಗಳವಾರ ರಾತ್ರಿ 10:50ರ ಸುಮಾರಿಗೆ ಮೊದಲಿಗೆ ಅಮೃತಸರದ ಖಾಸ್ಸಾ ಕಂಟೋನ್ಮೆಂಟ್ ಬಳಿ ಸ್ಫೋಟದ ಶಬ್ದ ಕೇಳಿಬಂದಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸೇನಾ ಅಧಿಕಾರಿಗಳೊಂದಿಗೆ ಪೊಲೀಸರು ಸ್ಥಳಕ್ಕೆ ತೆರಳಿ ಭದ್ರತಾ ಪರಿಶೀಲನೆ ನಡೆಸಿದ್ದಾರೆ.
ಸದ್ಯ ಎಫ್‌ಎಸ್‌ಎಲ್ ಸಂಗ್ರಹಿಸಿರುವ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಸ್ಫೋಟ ಹೇಗೆ ಸಂಭವಿಸಿತು ಮತ್ತು ಇದರ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ತೀವ್ರ ತನಿಖೆ ಮುಂದುವರಿದಿದೆ.