ನವದೆಹಲಿ: ಕೇಂದ್ರ ಸರ್ಕಾರ ಜಾತಿ ಜನಗಣತಿಯನ್ನು (Caste Census) ಘೋಷಿಸಿ ಒಂದು ವರ್ಷ ಕಳೆದಿದೆ. ಆದರೆ ಪ್ರಕ್ರಿಯೆಯ ಪೂರ್ಣಗೊಳಿಸುವ ಬಗ್ಗೆ ಇನ್ನೂ ಸ್ಪಷ್ಟತೆ ಕಾಣುತ್ತಿಲ್ಲ. ಪ್ರಧಾನಿ Narendra Modi ಜಾತಿ ಸಮೀಕ್ಷೆಯನ್ನು ಮುಂದೂಡಲು ಯತ್ನಿಸುತ್ತಿದ್ದಾರೆ ಎಂದು Indian National Congress ಆರೋಪಿಸಿದೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ Jairam Ramesh, ಒಂದು ವರ್ಷದ ಹಿಂದೆ ಇದೇ ದಿನ ಮೋದಿ ಸರ್ಕಾರ ಮುಂಬರುವ ಜನಗಣತಿಯಲ್ಲಿ ಜಾತಿ ಗಣತಿಯನ್ನು ಸೇರಿಸುವುದಾಗಿ ಘೋಷಿಸಿತ್ತು ಎಂದು ನೆನಪಿಸಿದರು. ಈಗ ಒಂದು ವರ್ಷ ಕಳೆದರೂ ಜಾತಿ ಜನಗಣತಿಯನ್ನು ಹೇಗೆ ಜಾರಿಗೊಳಿಸಲಾಗುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದರು. ಈ ವಿಷಯದಲ್ಲಿ ವಿರೋಧ ಪಕ್ಷಗಳು, ರಾಜ್ಯ ಸರ್ಕಾರಗಳು ಅಥವಾ ತಜ್ಞರೊಂದಿಗೆ ಯಾವುದೇ ಸಮಾಲೋಚನೆ ನಡೆದಿಲ್ಲ. ಕಾಂಗ್ರೆಸ್ ಅಧ್ಯಕ್ಷ Mallikarjun Kharge ಅವರು ಮೇ 5, 2025ರಂದು ಪ್ರಧಾನಿಗೆ ಪತ್ರ ಬರೆದಿದ್ದರೂ ಪ್ರತಿಕ್ರಿಯೆ ಬಂದಿಲ್ಲ. ಆ ಪತ್ರದಲ್ಲಿ ಉಲ್ಲೇಖಿಸಿದ ಪ್ರಶ್ನೆಗಳು ಇನ್ನೂ ಉತ್ತರಿಸದಂತೆಯೇ ಉಳಿದಿವೆ. ಇತ್ತೀಚೆಗೆ ನಡೆದ ಸಂಸತ್ತಿನ ವಿಶೇಷ ಅಧಿವೇಶನದ ನಂತರ, ಪ್ರಧಾನಿ ಜಾತಿ ಜನಗಣತಿಯನ್ನು ಮುಂದೂಡಲು ಮುಂದಾಗಿದ್ದಾರೆ ಎಂಬ ಅನುಮಾನ ಮತ್ತಷ್ಟು ಗಟ್ಟಿಯಾಗಿದೆ ಎಂದು ಹೇಳಿದರು.