ಬೆಂಗಳೂರು: ರೈತರ ಪ್ರತಿಭಟನೆಗಳನ್ನು ನಿರ್ಲಕ್ಷಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಯವರು ಗುರುವಾರ ತೀವ್ರವಾಗಿ ಕಿಡಿಕಾರಿದ್ದಾರೆ.
ದಿಶಾ ಸಭೆಗಾಗಿ ಮಂಡ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನ್ಯಾಯಯುತ ಬೆಲೆಗಾಗಿ ರೈತರು ಒಂದು ವಾರದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ, ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹತ್ತಿರದ ಪ್ರದೇಶದಲ್ಲಿಯೇ ಇದ್ದರು ರೈತರನ್ನು ಭೇಟಿ ಮಾಡಿಲ್ಲ ಎಂದು ಕಿಡಿಕಾರಿದರು.
ಇದೇ ವೇಳೆ ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಅಧಿಕಾರಾವಧಿಯನ್ನು ಸ್ಮರಿಸಿದ ಅವರು, ಕಬ್ಬು ಮಾರಾಟವಾಗದೆ ಉಳಿದಿದ್ದಾಗ, ನಾನು 25,000 ಕೋಟಿ ರೂ. ಸಾಲ ಮನ್ನಾ ಮಾಡಿದ್ದೆ. ಅಲ್ಲದೆ, ರೈತರಿಗೆ 250 ಕೋಟಿ ರೂ. ರೈತರಿಗೆ ಸಹಾಯ ಮಾಡಿದ್ದೆ. ವೈಯಕ್ತಿಕವಾಗಿ ಬೆಳೆಗಾರರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಚರ್ಚಿಸಿದ್ದೆ. ಇಂದು, ಸರ್ಕಾರ ಕೇಂದ್ರ ಸರ್ಕಾರ ಬೆಲೆಗಳನ್ನು ನಿರ್ಧರಿಸಬೇಕು ಎಂದು ಹೇಳುತ್ತಿದೆ. ಆದರೆ ನಾನು ಕ್ರಮ ಕೈಗೊಂಡಾಗ, ಅನುಮತಿಗಾಗಿ ದೆಹಲಿಗೆ ಹೋಗಿರಲಿಲ್ಲ ಎಂದು ಹೇಳಿದರು.
ರಾಜ್ಯ ಸರ್ಕಾರ ರೈತರ ಸಂಕಷ್ಟವನ್ನು ಪರಿಹರಿಸುವ ಬದಲು ರಾಜಕೀಯ ಮಾಡುತ್ತಿದೆ. ಇದು ಆಡಳಿತವಲ್ಲ, ಇದು ರೈತರಿಗೆ ಮಾಡಿದ ದ್ರೋಹ. ಸರ್ಕಾರದ ನಿರ್ಧಾರಗಳನ್ನು ಪರಿಶೀಲಿಸಿದ ನಂತರ ನಾವು ಮುಂದಿನ ಕ್ರಮವನ್ನು ಕೈಗೊಳ್ಳುತ್ತೇವೆಂದು ತಿಳಿಸಿದರು.
ಬಳಿಕ ಬಿಡದಿ ಟೌನ್‌ಶಿಪ್ ಯೋಜನೆಯನ್ನು ತೀವ್ರವಾಗಿ ವಿರೋಧಿಸಿದ ಅವರು, ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸುವಲ್ಲಿ ರೈತರೊಂದಿಗೆ ದೃಢವಾಗಿ ನಿಲ್ಲುವುದಾಗಿ ಭರವಸೆ ನೀಡಿದರು.
ರಾಜ್ಯ ಸರ್ಕಾರ ಬಿಡದಿ ಟೌನ್‌ಶಿಪ್ ಯೋಜನೆಯ ಹೆಸರಿನಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ಲೂಟಿ ಮಾಡಲು ಪ್ರಯತ್ನಿಸುತ್ತಿದೆ. ರೈತರು ಭಯಪಡಬಾರದು, ನಿಮ್ಮ ಒಂದು ಇಂಚು ಭೂಮಿಯನ್ನೂ ಕೂಡ ಸರ್ಕಾರಕ್ಕೆ ನೀಡದಿರಿ. ನಾನು ನಿಮ್ಮೊಂದಿಗಿದ್ದೇನೆ ಎಂದು ಭರವಸೆ ನೀಡಿದರು.