ತುಮಕೂರು: ಜಿಲ್ಲೆಯಲ್ಲಿ ನವಿಲುಗಳ ಸರಣಿ ಸಾವು ಮುಂದುವರಿದಿದ್ದು, Tumakuru ಹೊರವಲಯದ ಗೂಳರಿವೆ ಸಮೀಪದ ಸುಣ್ಣಕಲ್ಲು ಕಟ್ಟೆ ಪ್ರದೇಶದಲ್ಲಿ ಇಂದು ಮತ್ತೆರಡು ನವಿಲುಗಳ ಕಳೇಬರ ಪತ್ತೆಯಾಗಿವೆ.
ಕಳೆದ 15 ದಿನಗಳಲ್ಲೇ ಜಿಲ್ಲೆಯ ವಿವಿಧ ಭಾಗಗಳಲ್ಲಿ 44 ನವಿಲುಗಳು ಮೃತಪಟ್ಟಿದ್ದವು. ಕಳೆದ ತಿಂಗಳು ಕೂಡ ಜಿಲ್ಲೆಯ ಹಲವೆಡೆ ನವಿಲುಗಳ ಸಾವಿನ ಪ್ರಕರಣಗಳು ವರದಿಯಾಗಿದ್ದವು. ಏಪ್ರಿಲ್ 16ರಿಂದ 21ರವರೆಗೆ ಬೊಮ್ಮನಹಳ್ಳಿ, ಕೋಳಿಹಳ್ಳಿ, ಭೈರಸಂದ್ರ ಹಾಗೂ ಹುಲ್ಲೆನಹಳ್ಳಿ ಗ್ರಾಮಗಳಲ್ಲಿ ಸುಮಾರು 32 ನವಿಲುಗಳು ಸಾವನ್ನಪ್ಪಿದ್ದವು. ಆರಂಭದಲ್ಲಿ ತೀವ್ರ ಬಿಸಿಗಾಳಿ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿತ್ತು.
ಈ ಹಿಂದೆ ಮೃತಪಟ್ಟ ನವಿಲುಗಳ ಅಂಗಾಂಶಗಳನ್ನು ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದ್ದು, ಅವುಗಳಲ್ಲಿ ಹೆಚ್5ಎನ್1 ಹಕ್ಕಿಜ್ವರ ಸೋಂಕು ದೃಢಪಟ್ಟಿತ್ತು. ಇದೀಗ ಮತ್ತೆ ನವಿಲುಗಳ ಸಾವು ಸಂಭವಿಸುತ್ತಿರುವುದು ಅರಣ್ಯ ಇಲಾಖೆ ಮತ್ತು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.