ದಾವಣಗೆರೆ: ವಚನಾನಂದ ಶ್ರೀಗಳು ಅವರ ಬದಲಿಗೆ ಪಂಚಮಸಾಲಿ ಪೀಠಕ್ಕೆ ನಾನು ಬರೋದು ಭಕ್ತರು ಹಾಗೂ ಟ್ರಸ್ಟಿಗಳ ನಿರ್ಧಾರ ಎಂದು ಮನಗುಳಿ ಸಂಗನಬಸವ ಸ್ವಾಮೀಜಿ ತಿಳಿಸಿದ್ದಾರೆ.
ಹರಿಹರ ಪಂಚಮಸಾಲಿ ಪೀಠದ ವಿವಾದದ ಹಿನ್ನಲೆಯಲ್ಲಿ ಅವರು ಹರಿಹರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆಯೂ ವಚನಾನಂದ ಸ್ವಾಮೀಜಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಹರಜಾತ್ರೆಯಲ್ಲಿ ವಚನಾನಂದ ಸ್ವಾಮೀಜಿ ಗಣ್ಯರಿಗೆ ಅವಮಾನ ಮಾಡಿದ್ದಾರೆ ಹಾಗೂ ಭಕ್ತರಲ್ಲಿ ಭಿನ್ನತೆ ಉಂಟುಮಾಡಿದ್ದಾರೆ ಎಂದು ಆರೋಪಿಸಿದ್ದರು. ಜೊತೆಗೆ, ಪೀಠಕ್ಕೆ ನನ್ನ ಆಗಮನ ಭಕ್ತರು ಮತ್ತು ಟ್ರಸ್ಟಿಗಳ ಇಚ್ಛೆಯ ಮೇಲಿದೆ. ಸಮಾಜ ದೊಡ್ಡದಾಗಿದೆ, ಈ ಭಾಗದಲ್ಲಿಯೂ ನನಗೆ ಅಪಾರ ಭಕ್ತರ ಬೆಂಬಲವಿದೆ ಎಂದು ಹೇಳಿದ್ದಾರೆ.
ಈ ವಾರದೊಳಗೆ ವಚನಾನಂದ ಸ್ವಾಮೀಜಿಯನ್ನು ಪೀಠದಿಂದ ದೂರ ಮಾಡುವ ಬಗ್ಗೆ ಟ್ರಸ್ಟಿಗಳು ಚರ್ಚೆ ನಡೆಸುತ್ತಿದ್ದಾರೆ. ಸೋಮವಾರ (ಏ.27) ಮಠದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಲೆಕ್ಕಪತ್ರಗಳನ್ನು ವಿವರವಾಗಿ ಮಂಡಿಸಿದ್ದರು. ಇದರ ಬೆನ್ನಲ್ಲೇ ಸ್ವಾಮೀಜಿಯನ್ನು ಸ್ಥಾನದಿಂದ ತೆಗೆದುಹಾಕುವ ವಿಚಾರ ಗಂಭೀರವಾಗಿ ಪರಿಗಣಿಸಲಾಗಿದೆ. ಈ ಸಂಬಂಧ ಕಾನೂನು ಹೋರಾಟಕ್ಕೂ ಟ್ರಸ್ಟಿಗಳು ಮುಂದಾಗಿದ್ದಾರೆ. ವಚನಾನಂದ ಸ್ವಾಮೀಜಿಯವರ ಬಳಿಕ ಮನಗುಳಿ ಸಂಗನಬಸವ ಸ್ವಾಮೀಜಿಯನ್ನು ಪೀಠಾಧಿಪತಿಯಾಗಿ ನೇಮಿಸುವುದೇ ಎಂಬುದು ಮುಂದಿನ ಬೆಳವಣಿಗೆಯಲ್ಲಿ ಸ್ಪಷ್ಟವಾಗಲಿದೆ.