ಹಾಸನ: ಚಿಕ್ಕಹೊನ್ನೇನಹಳ್ಳಿಯ ಪಶುವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ನಲ್ಲಿ ರ‍್ಯಾಗಿಂಗ್ ವಿಚಾರಕ್ಕೆ ತೀವ್ರ ಗಲಾಟೆ ಭುಗಿಲೆದ್ದಿದ್ದು, ಸೀನಿಯರ್ ಮತ್ತು ಜ್ಯೂನಿಯರ್ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದು ಹಲವರು ಗಾಯಗೊಂಡಿದ್ದಾರೆ. ಹಿರಿಯರು ಕಿರಿಯರಿಗೆ ರ‍್ಯಾಗಿಂಗ್ ಮಾಡಿದ್ದಾರೆಯೆಂಬ ಆರೋಪದ ಹಿನ್ನೆಲೆ ಪ್ರಶ್ನೆ ಮಾಡಿದ ಜ್ಯೂನಿಯರ್‌ಗಳ ಮೇಲೆ ದಾಳಿ ನಡೆದಿರುವುದು ಘಟನೆಗೆ ಗಂಭೀರ ತಿರುವು ನೀಡಿದೆ. ಗಾಯಗೊಂಡ ವಿದ್ಯಾರ್ಥಿಗಳು ಡೀನ್ ನಟರಾಜ್ ಅವರಿಗೆ ದೂರು ನೀಡಿದ್ದು, ಪ್ರಕರಣದ ತನಿಖೆಗೆ ವಿಶೇಷ ಸಮಿತಿ ರಚಿಸಲು ಆಡಳಿತ ಮಂಡಳಿ ಮುಂದಾಗಿದೆ. ಸಮಿತಿಯ ವರದಿ ಆಧರಿಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಕಾಲೇಜು ತಿಳಿಸಿದೆ. ಘಟನೆ ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, ವಿದ್ಯಾರ್ಥಿಗಳು ಅಧಿಕೃತವಾಗಿ ಪೊಲೀಸರಿಗೆ ದೂರು ನೀಡಲು ಮುಂದೆ ಬರದಿರುವುದು ಗಮನಾರ್ಹವಾಗಿದೆ.