ಮಡಿಕೇರಿ: ಸಾಕಾನೆಗಳ (Elephant) ನಡುವಿನ ಘರ್ಷಣೆಯಲ್ಲಿ ಪ್ರವಾಸಿ ಮಹಿಳೆಯೊಬ್ಬರು ಮೃತಪಟ್ಟ ದುರ್ಘಟನೆ ಕುಶಾಲನಗರ (Kushalanagar) ತಾಲೂಕಿನ ದುಬಾರೆ ಆನೆ ಶಿಬಿರದಲ್ಲಿ ನಡೆದಿದೆ. ಚೆನ್ನೈ ಮೂಲದ ಜಿನ್ಮು (33) ಮೃತ ದುರ್ದೈವಿ. ಮೇ 18ರ ಬೆಳಿಗ್ಗೆ ಜಿನ್ಮು ಹಾಗೂ ಅವರ ಪತಿ ಜೋಯಲ್ ದುಬಾರೆ (Dubare) ಆನೆ ಶಿಬಿರಕ್ಕೆ ಭೇಟಿ ನೀಡಿದ್ದರು. ಕೆಲ ಸಮಯ ಸಾಕಾನೆಗಳೊಂದಿಗೆ ಫೋಟೋ ತೆಗೆಸಿಕೊಂಡ ಬಳಿಕ, ಆನೆಗಳಿಗೆ ಸ್ನಾನ ಮಾಡಿಸುವ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ನದಿಯ ಮಧ್ಯೆ ಮಾರ್ತಾಂಡ ಮತ್ತು ಕಂಜನ್ ಆನೆಗಳ ನಡುವೆ ಏಕಾಏಕಿ ಕಾದಾಟ ಆರಂಭವಾಗಿದೆ. ಕ್ಷಣಾರ್ಧದಲ್ಲಿ ಆನೆಗಳ ಘರ್ಷಣೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮಾರ್ತಾಂಡ ಆನೆ ಜಿನ್ಮು ಅವರ ಮೇಲೆ ಬಿದ್ದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತಿ ಜೋಯಲ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ಶಿಬಿರಕ್ಕೆ ಬಂದಿದ್ದ ಪ್ರವಾಸಿಗರಲ್ಲಿ ಆತಂಕ ಮನೆಮಾಡಿದೆ. ಈ ಹಿಂದೆ ಮೈಸೂರು ದಸರಾ ಸಂದರ್ಭದಲ್ಲೂ ಕಂಜನ್ ಆನೆ ನಿಯಂತ್ರಣ ತಪ್ಪಿ ಅರಮನೆ ಆವರಣದಿಂದ ಹೊರಬಂದು ಆತಂಕ ಸೃಷ್ಟಿಸಿತ್ತು. ದುಬಾರೆ ಶಿಬಿರದಲ್ಲಿಯೂ ಕಂಜನ್ ಹಲವು ಬಾರಿ ಆಕ್ರಮಣಕಾರಿ ವರ್ತನೆ ತೋರಿದ್ದಾಗಿ ತಿಳಿದುಬಂದಿದೆ