ಆನೇಕಲ್: ಇಲ್ಲಿನ ಸರ್ಜಾಪುರ ಸಮೀಪದ ಮುಗಳೂರು ಕೆರೆ ಅಂಗಳದಲ್ಲಿ ಮಾನವ ತಲೆ ಬುರುಡೆ ಹಾಗೂ ಮೂಳೆಗಳು ಪತ್ತೆಯಾಗಿವೆ. ಕುರಿಗಾಹಿಗಳು ಕೆರೆ ಅಂಗಳದಲ್ಲಿ ಬುರುಡೆ ಮತ್ತು ಮೂಳೆಗಳನ್ನು ಗಮನಿಸಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಎಎಸ್ಪಿ ವೆಂಕಟೇಶ್ ಪ್ರಸನ್ನ ಹಾಗೂ ಡಿವೈಎಸ್ಪಿ ಗೋಪಾಲ್ ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೋಕೋ ತಂಡ ಸ್ಥಳಕ್ಕೆ ಆಗಮಿಸಿ ಬುರುಡೆ ಮತ್ತು ಮೂಳೆಗಳ ಪರಿಶೀಲನೆ ನಡೆಸಿದೆ. ಸ್ಥಳದಲ್ಲಿ ಸೀರೆ ಪತ್ತೆಯಾಗಿರುವ ಹಿನ್ನೆಲೆ ಇದು ಮಹಿಳೆಯ ಶವ ಇರಬಹುದೆಂಬ ಶಂಕೆ ವ್ಯಕ್ತವಾಗಿದೆ. ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಬೇಸಿಗೆ ಹಿನ್ನೆಲೆ ಕೆರೆಯ ನೀರಿನ ಪ್ರಮಾಣ ಕಡಿಮೆಯಾಗಿದ್ದು, ನಾಯಿಗಳು ಅಸ್ಥಿಪಂಜರವನ್ನು ಎಳೆದಾಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.