ಮುಂಬೈ: ಟೀಮ್ ಇಂಡಿಯಾ ತಾರೆ ಸ್ಮೃತಿ ಮಂಧಾನ ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಛಲ್ ಅವರ ವಿವಾಹ ಸಮಾರಂಭ ನವೆಂಬರ್ 23ರಂದು ನೆರವೇರಬೇಕಿತ್ತು. ಆದರೆ ಸ್ಮೃತಿ ಅವರ ತಂದೆ ಶ್ರೀನಿವಾಸ್ ಮಂಧಾನ ಅವರಿಗೆ ಅಕಸ್ಮಿಕವಾಗಿ ಹೃದಯಾಘಾತ ಉಂಟಾದ ಕಾರಣ ಕಾರ್ಯಕ್ರಮವನ್ನು ತುರ್ತುವಾಗಿ ಮುಂದೂಡಲಾಗಿದೆ.
ಸಾಂಗ್ಲಿಯ ಸಮ್ದೋಲ್‌ನಲ್ಲಿ ಇರುವ ಮಂಧಾನ ಕುಟುಂಬದ ಫಾರ್ಮ್‌ಹೌಸ್‌ನಲ್ಲಿ ಮದುವೆ ಆಯೋಜಿಸಲಾಗಿತ್ತು. ಅನಿರೀಕ್ಷಿತ ಆರೋಗ್ಯ ತೊಂದರೆ ಹಿನ್ನೆಲೆಯಲ್ಲಿ ಸಮಾರಂಭವನ್ನು ಮುಂದೂಡಲಾಗಿದೆ ಎಂದು ಸ್ಮೃತಿ ಅವರ ವ್ಯವಹಾರ ನಿರ್ವಾಹಕ ತುಹಿನ್ ಮಿಶ್ರಾ ದೃಢಪಡಿಸಿದ್ದಾರೆ.
ಘಟನೆಯ ಬಳಿಕ ಸ್ಮೃತಿ ಅವರ ತಂದೆಯನ್ನು ತಕ್ಷಣವೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಕುಟುಂಬ ಮೂಲಗಳ ಪ್ರಕಾರ, ಸ್ಮೃತಿ ಮತ್ತು ಅವರ ಆಪ್ತರು ತಕ್ಷಣವೇ ಆಸ್ಪತ್ರೆಗೆ ಧಾವಿಸಿ ತಂದೆಯ ಚಿಕಿತ್ಸೆಯಲ್ಲಿ ತೊಡಗಿದ್ದಾರೆ.
ಪ್ರಸ್ತುತ ಶ್ರೀನಿವಾಸ್ ಮಂಧಾನ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ವೈದ್ಯರು ನಿಗಾವಹಿಸುತ್ತಿದ್ದಾರೆ ಎಂದು ಕುಟುಂಬ ವಲಯ ತಿಳಿಸಿದೆ. ಇಂದಿಗೆ ನಿಗದಿ ಮಾಡಲಾಗಿದ್ದ ಮದುವೆಯನ್ನು ಅಧಿಕೃತವಾಗಿ ರದ್ದುಗೊಳಿಸಿದ್ದು, ಹೊಸ ದಿನಾಂಕವನ್ನು ನಂತರ ನಿರ್ಧರಿಸಲಾಗುವುದು.
ಬೆಳಿಗ್ಗೆ ಉಪಾಹಾರ ಸೇವಿಸುತ್ತಿರುವ ವೇಳೆಲೇ ಅವರಿಗೆ ಅಸ್ವಸ್ಥತೆ ಕಾಣಿಸಿಕೊಂಡಿದ್ದು, ಆರಂಭದಲ್ಲಿ ಕುಟುಂಬ ಸದಸ್ಯರು ಸಾಮಾನ್ಯ ಸಮಸ್ಯೆಯೆಂದು ಭಾವಿಸಿದರೂ, ಸ್ಥಿತಿ ಹದಗೆಟ್ಟ ಕಾರಣ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಮಂಧಾನ ತಂಡದ ನಿರ್ವಾಹಕ ತಿಳಿಸಿದ್ದಾರೆ.
“ಸ್ಮೃತಿಗೆ ತಂದೆಯೇ ಎಲ್ಲ. ಅವರು ಚೇತರಿಸಿಕೊಳ್ಳುವವರೆಗೆ ಯಾವುದೇ ಆಚರಣೆ ಮುಂದುವರಿಸುವುದಿಲ್ಲವೆಂದು ಆಕೆಯೇ ಸ್ಪಷ್ಟಪಡಿಸಿದ್ದಾರೆ,” ಎಂದು ಮಿಶ್ರಾ ಹೇಳಿದರು. ಕುಟುಂಬ ಈಗ ಆಘಾತದಲ್ಲಿದ್ದು, ಶ್ರೀನಿವಾಸ್ ಮಂಧಾನ ಪುನಃ ಚೇತರಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.
ಸ್ಮೃತಿ–ಪಲಾಶ್ ಮದುವೆ intimate ಸಮಾರಂಭವಾಗಿ, ಕುಟುಂಬ ಸದಸ್ಯರು ಹಾಗೂ ಕೆಲವು ಕ್ರಿಕೆಟ್ ವ್ಯಕ್ತಿತ್ವಗಳ ಸಮ್ಮುಖದಲ್ಲಿ ನೆರವೇರಬೇಕಿತ್ತು. ಆದರೆ ತಂದೆಯ ಆರೋಗ್ಯ ಸಮಸ್ಯೆಯಿಂದ ಮದುವೆ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.