ಬೆಂಗಳೂರು: ದೆಹಲಿಯಿಂದ ಆಗಮಿಸಿದ್ದ ಏರ್ ಇಂಡಿಯಾ ವಿಮಾನವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡುವ ವೇಳೆ ತುರ್ತು ಭೂ ಸ್ಪರ್ಶ ಮಾಡಿಕೊಂಡ ಘಟನೆ ನಡೆದಿದೆ.
ದೆಹಲಿಯಿಂದ ಪ್ರಯಾಣಿಕರನ್ನು ಕರೆತಂದ AI2651 ವಿಮಾನವು ಲ್ಯಾಂಡಿಂಗ್ ಸಂದರ್ಭದಲ್ಲಿ ಹಿಂಭಾಗ ರನ್‌ವೇಗೆ ಡಿಕ್ಕಿ ಹೊಡೆದಿರುವುದಾಗಿ ತಿಳಿದುಬಂದಿದೆ.
ಘಟನೆಯ ಮುನ್ನ ಅದೇ ರನ್‌ವೇಯಿಂದ ಸರಕು ಸಾಗಣೆ ವಿಮಾನವೊಂದು ಟೇಕ್‌ಆಫ್ ಆಗಿದ್ದು, ಇದರಿಂದ ಉಂಟಾದ ಗಾಳಿಯ ಅಸ್ಥಿರತೆಯಿಂದ ವಿಮಾನದ ಸಮತೋಲನ ತಪ್ಪಿರಬಹುದು ಎಂದು ಅಂದಾಜಿಸಲಾಗಿದೆ. ಈ ಸಂದರ್ಭದಲ್ಲಿ ಪೈಲಟ್ ವಿಮಾನವನ್ನು ಪುನಃ ಏರಿಸುವ ಪ್ರಯತ್ನ ನಡೆಸಿದ್ದು, ಆಗ ಹಿಂಭಾಗ ರನ್‌ವೇಗೆ ಅಪ್ಪಳಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಲ್ಯಾಂಡಿಂಗ್ ಸುರಕ್ಷಿತವಾಗಿ ಪೂರ್ಣಗೊಂಡಿದ್ದು, ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿ ಯಾವುದೇ ಗಾಯಗಳಿಲ್ಲದೆ ಸಾಮಾನ್ಯವಾಗಿ ವಿಮಾನದಿಂದ ಇಳಿದಿದ್ದಾರೆ ಎಂದು ಏರ್ ಇಂಡಿಯಾ ಸ್ಪಷ್ಟಪಡಿಸಿದೆ.
ಘಟನೆಯ ಬಳಿಕ ವಿಮಾನವನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಇದರಿಂದಾಗಿ ಬೆಂಗಳೂರಿನಿಂದ ದೆಹಲಿಗೆ ತೆರಳಬೇಕಿದ್ದ AI2652 ವಿಮಾನವನ್ನು ರದ್ದುಗೊಳಿಸಲಾಗಿದೆ. ತೊಂದರೆಗೊಳಗಾದ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.