ವಿಜಯಪುರ: ಮನೆಯ ಮೇಲ್ಛಾವಣಿ ಏಕಾಏಕಿ ಕುಸಿದು ಮಹಿಳೆಯೊಬ್ಬರು ಜೀವಂತ ಸಮಾಧಿಯಾದ ದುರ್ಘಟನೆ ವಿಜಯಪುರ ಜಿಲ್ಲೆ ನಿಡಗುಂದಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಗೌರೀಶ್ವರ ದೇವಸ್ಥಾನದ ಸಮೀಪ ಈ ಅವಘಡ ಸಂಭವಿಸಿದ್ದು, ಮಹಾದೇವಿ ವಾರದ (55) ಮೃತ ಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಹಳೆಯ ಮನೆ ತೇವಗೊಂಡಿದ್ದು, ಅದರ ಮೇಲ್ಛಾವಣಿ ಕುಸಿದ ಪರಿಣಾಮ ದುರಂತ ನಡೆದಿದೆ. ಮನೆಯಲ್ಲಿ ಮಲಗಿದ್ದ ಮಹಾದೇವಿ ಅವರ ಮೇಲೆ ನಸುಕಿನ ಜಾವ ಛಾವಣಿ ಬಿದ್ದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮನೆಯ ಹೊರಭಾಗದಲ್ಲಿ ಪತಿ ಶಿವಾನಂದ ಮಲಗಿದ್ದ ಕಾರಣ ಅಪಾಯದಿಂದ ಪಾರಾಗಿದ್ದಾರೆ. ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ನಿಡಗುಂದಿ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮನಕಲಕುವಂತಿತ್ತು. ಈ ಸಂಬಂಧ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.