ಮಡಿಕೇರಿ: ದುಬಾರೆ ಸಾಕಾನೆ ಶಿಬಿರದಲ್ಲಿ (Dubare Elephant Camp) ಸೋಮವಾರ ನಡೆದ ಕಂಜನ್ (Kanjan) ಹಾಗೂ ಮಾರ್ತಾಂಡ (Marthanda) ಆನೆಗಳ ನಡುವಿನ ಭೀಕರ ಕಾದಾಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದೆ. ಸೋಮವಾರ ನಡೆದ ಕಾದಾಟದ ವೇಳೆ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಕಂಜನ್ ಆನೆ ಮಾರ್ತಾಂಡ ಆನೆಯ ಹೊಟ್ಟೆ, ಕಿವಿ ಸೇರಿದಂತೆ ದೇಹದ ಹಲವು ಭಾಗಗಳಿಗೆ ತೀವ್ರವಾಗಿ ಗಾಯಪಡಿಸಿತ್ತು. ಗಾಯಗೊಂಡಿದ್ದ ಮಾರ್ತಾಂಡ ಆನೆಗೆ ದುಬಾರೆ ಶಿಬಿರದಲ್ಲೇ ಡಾ. ಮುಜಿಭ್ ಹಾಗೂ ಚಿಟ್ಟಿಯಪ್ಪ ಚಿಕಿತ್ಸೆ ನೀಡುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮಾರ್ತಾಂಡ ಮೃತಪಟ್ಟಿದೆ. ಮಹಿಳೆ ಸಾವನ್ನಪ್ಪಿದ ಪ್ರಕರಣದ ಹಿನ್ನೆಲೆ ಇಂದು ದುಬಾರೆ ಸಾಕಾನೆ ಶಿಬಿರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದು, ಮುಂದಿನ ಆದೇಶದವರೆಗೆ ಶಿಬಿರ ಕಾರ್ಯಾಚರಣೆ ಸ್ಥಗಿತಗೊಳ್ಳಲಿದೆ. ಇನ್ನು ಕಾದಾಟದಲ್ಲಿ ಮೃತಪಟ್ಟ ಮಹಿಳೆಯ ಕುಟುಂಬಸ್ಥರು ನೇತ್ರದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದು, ಮೃತದೇಹವನ್ನು ಚೆನ್ನೈಗೆ ರವಾನಿಸಲಾಗಿದೆ.