ಈ ಬಾರಿ ಬೆಳ್ತಂಗಡಿ ತಾಲೂಕಿನಲ್ಲಿ ಫೆಬ್ರವರಿಯಿಂದಲೇ ಬೇಸಿಗೆ ಮಳೆ ಆರಂಭವಾಗಿ, ಮಧ್ಯ ಮಧ್ಯೆ ಸುರಿಯುತ್ತಲೇ ಇದೆ. ಇದುವರೆಗೆ ಹತ್ತು ಬಾರಿ ಮೇಲ್ಪಟ್ಟ ಮಳೆಯಾಗಿದ್ದು, ಪ್ರತೀ ಬಾರಿ ಗಾಳಿ ಜತೆಗೇ ಸುರಿಯುವ ಮಳೆ ಜನರಲ್ಲಿ ಆತಂಕ ಹುಟ್ಟಿಸುತ್ತಿದೆ ಹಾಗೂ ಹಲವು ಅವಾಂತರಗಳಿಗೆ ಕಾರಣವಾಗುತ್ತಿದೆ.
ತಾಲೂಕಿನ ಬಹುತೇಕ ಭಾಗ ಅರಣ್ಯ ಪ್ರದೇಶವಾಗಿದ್ದು, ವಿದ್ಯುತ್ ಲೈನ್‌ಗಳು ಕಾಡಿನ ಮಧ್ಯೆಯೇ ಹಾದು ಹೋಗುತ್ತವೆ. ಜೊತೆಗೆ ರಬ್ಬರ್, ಅಡಕೆ ತೋಟಗಳ ನಡುವೆಯೂ ಲೈನ್‌ಗಳು ಇರುವುದರಿಂದ, ಬಿರುಗಾಳಿಗೆ ಮರಗಳು, ಅಡಕೆ, ತೆಂಗು ಮತ್ತು ರಬ್ಬರ್ ಮರಗಳು ವಿದ್ಯುತ್ ತಂತಿಗಳ ಮೇಲೆ ಉರುಳಿ ಬಿದ್ದು ಹಾನಿ ಉಂಟುಮಾಡುತ್ತಿವೆ.
ಗ್ರಾಮೀಣ ಭಾಗಗಳಲ್ಲಿ ಒಂದು ಬಾರಿ ಮಳೆ ಸುರಿದರೂ ದಿನಪೂರ್ತಿ ವಿದ್ಯುತ್ ವ್ಯತ್ಯಯ ಎದುರಾಗುತ್ತಿದೆ. ವಿದ್ಯುತ್ ಲೈನ್‌ಗಳ ಮೇಲೆ ಬೀಳುವ ಸೋಗೆ, ಕೊಂಬೆಗಳು, ಬಿದಿರು ಮತ್ತು ಬಳ್ಳಿಗಳು ವಿದ್ಯುತ್ ಸರಬರಾಜು ನಿರಂತರತೆಗೆ ಅಡ್ಡಿಯಾಗುತ್ತಿವೆ.
ಬೇಸಿಗೆ ಸಂದರ್ಭದಲ್ಲಿ ಮೆಸ್ಕಾಂ ವತಿಯಿಂದ ಅಪಾಯಕಾರಿ ಮರದ ಕೊಂಬೆಗಳನ್ನು ಕತ್ತರಿಸುವ ಕಾರ್ಯ ನಡೆಯುತ್ತಿದೆ. ಆದರೆ ಇದು ಕೇವಲ ಮೂರು ಅಡಿ ವ್ಯಾಪ್ತಿಗೆ ಮಾತ್ರ ಸೀಮಿತವಾಗಿರುವುದರಿಂದ ಸಮರ್ಪಕ ಫಲಿತಾಂಶ ನೀಡುತ್ತಿಲ್ಲ. ಕಳೆದ ಎರಡು ತಿಂಗಳಲ್ಲಿ 400ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಕುಸಿದಿವೆ.
ಮಳೆ-ಗಾಳಿಯಿಂದ ತಾಲೂಕಿನ ಗ್ರಾಮೀಣ ಮನೆಗಳಿಗೂ ಹಾನಿ ಸಂಭವಿಸಿದೆ. ಮನೆಗಳ ಸುತ್ತಮುತ್ತಲಿನ ಮರಗಳು ಮತ್ತು ಅಡಕೆ, ತೆಂಗಿನ ಮರಗಳು ಮನೆಗಳ ಮೇಲೆ ಬಿದ್ದು ನಷ್ಟ ಉಂಟಾಗಿದೆ. ಈಗಾಗಲೇ ಸುಮಾರು 40ಕ್ಕೂ ಹೆಚ್ಚು ಮನೆಗಳು ಹಾನಿಗೊಳಗಾಗಿವೆ.
ಬಿರುಗಾಳಿಯಿಂದ ಕೃಷಿಗೂ ದೊಡ್ಡ ಮಟ್ಟದ ನಷ್ಟವಾಗಿದೆ. ನೂರಾರು ಅಡಕೆ, ತೆಂಗು ಮತ್ತು ರಬ್ಬರ್ ಮರಗಳು ಮುರಿದು ಬಿದ್ದಿದ್ದು, ತೋಟಗಳಲ್ಲಿನ ದೊಡ್ಡ ಮರಗಳು ಉರುಳಿ ಬೆಳೆಗಳಿಗೆ ಹಾನಿ ಮಾಡಿವೆ.
ಏಪ್ರಿಲ್ ತಿಂಗಳಲ್ಲಿ ನಡೆಯುವ ಸಮಾರಂಭಗಳಿಗೂ ಮಳೆ-ಗಾಳಿ ಅಡ್ಡಿಯಾಗಿದೆ. ದಿಢೀರ್ ಸುರಿಯುವ ಮಳೆ ಮತ್ತು ಗಾಳಿಯಿಂದ ಚಪ್ಪರ, ಶಾಮಿಯಾನಗಳು ಹಾರಿ ಹೋಗುತ್ತಿದ್ದು, ಆಯೋಜಕರಿಗೆ ತೊಂದರೆ ಉಂಟಾಗಿದೆ.
ಮಳೆ ಮತ್ತು ಗಾಳಿಯಿಂದ ಉಂಟಾಗುವ ಹಾನಿ ಸಂದರ್ಭಗಳಲ್ಲಿ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡ ನೆರವಿಗೆ ಬರುತ್ತಿದೆ. ರಸ್ತೆ, ಮನೆ ಮತ್ತು ವಿದ್ಯುತ್ ಲೈನ್‌ಗಳ ಮೇಲೆ ಬಿದ್ದ ಮರಗಳನ್ನು ತೆರವುಗೊಳಿಸಿ ತ್ವರಿತ ಪರಿಹಾರ ಒದಗಿಸುತ್ತಿದೆ.
ಆದರೆ ಆಗಾಗ ಸುರಿಯುವ ಮಳೆಯಿಂದ ನೀರಿನ ಸಮಸ್ಯೆ ತಾತ್ಕಾಲಿಕವಾಗಿ ನಿವಾರಣೆಯಾಗಿದೆ. ಕೃಷಿ ತೋಟಗಳಿಗೆ ಈಗ ನೀರು ಪೂರೈಕೆ ಅಗತ್ಯವಿಲ್ಲದೆ, ಜಲಮೂಲಗಳಲ್ಲಿ ನೀರಿನ ಮಟ್ಟ ಸಮತೋಲನದಲ್ಲಿದೆ. ಕೆರೆ, ಬಾವಿಗಳಲ್ಲಿಯೂ ನೀರಿನ ಮಟ್ಟ ಸಾಮಾನ್ಯವಾಗಿದೆ.
ಮಳೆಯ ಜೊತೆಗೆ ಬೀಸುವ ಗಾಳಿ ಜನರಲ್ಲಿ ಆತಂಕ ಹೆಚ್ಚಿಸುತ್ತಿದೆ. ಪ್ರತೀ ಬಾರಿ ಗಾಳಿಯಿಂದ ಕೃಷಿ ಹಾನಿ ಹೆಚ್ಚಾಗುತ್ತಿದ್ದು, ವಿದ್ಯುತ್ ಪೂರೈಕೆ ದಿನಗಟ್ಟಲೆ ಸ್ಥಗಿತಗೊಳ್ಳುತ್ತಿದೆ. ಈ ಬಾರಿ ಗಾಳಿಯ ತೀವ್ರತೆ ಹೆಚ್ಚಾಗಿದೆ ಎಂಬುದು ಸ್ಥಳೀಯರ ಅಭಿಪ್ರಾಯ.
ಮಳೆ ಹಾನಿಗೊಳಗಾದ ಪ್ರದೇಶಗಳಿಗೆ ಗ್ರಾಮಲೆಕ್ಕಿಗರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ನಂತರ ಎಂಜಿನಿಯರಿಂಗ್ ವಿಭಾಗ ಹಾನಿ ಮೌಲ್ಯಮಾಪನ ಮಾಡಿ ವರದಿ ಸಲ್ಲಿಸಿದ ಬಳಿಕ ಪರಿಹಾರ ವಿತರಣೆ ನಡೆಯಲಿದೆ.