ಬೆಂಗಳೂರು, ಏಪ್ರಿಲ್ 30: ನಗರದಲ್ಲಿ ಆಲಿಕಲ್ಲು, ಗುಡುಗು-ಮಿಂಚಿನೊಂದಿಗೆ ನಿನ್ನೆ ಸುರಿದ ಧಾರಾಕಾರ ಮಳೆ ರಾಜಧಾನಿಯ ಏಪ್ರಿಲ್ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಿಸಿದೆ. ನಿನ್ನೆ ಸಂಜೆ 111 ಮಿಲಿ ಮೀಟರ್ ಮಳೆಯಾಗಿದ್ದು, 2001ರ ದಾಖಲೆಗೆ ಸಮವಾಗಿದೆ. ಈ ನಡುವೆ ಮುಂದಿನ ಮೂರು ದಿನಗಳ ಕಾಲ ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಗಂಟೆಗೆ 30ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರು ವಿವಿಧ ಪ್ರದೇಶಗಳಲ್ಲಿ ದಾಖಲಾಗಿದ ಮಳೆಯ ಪ್ರಮಾಣ ಹೀಗಿದೆ:
ಸಂಪಂಗಿರಾಮನಗರ- 39 ಮಿಮೀ
ಪುಲಕೇಶಿನಗರ- 36.50 ಮಿಮೀ
ಬೊಮ್ಮನಹಳ್ಳಿ- 31 ಮಿಮೀ
ಕಾಟನ್‌ಪೇಟೆ- 29 ಮಿಮೀ
HAL ವಿಮಾನ ನಿಲ್ದಾಣ- 25 ಮಿಮೀ
ಬಿಟಿಎಂ ಲೇಔಟ್- 22.50 ಮಿಮೀ
ಮಾರತಹಳ್ಳಿ- 18.50 ಮಿಮೀ
ಇನ್ನೊಂದೆಡೆ, ರಾಜ್ಯದ ಸುಮಾರು ಮುಕ್ಕಾಲು ಭಾಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಯಾದಗಿರಿ, ರಾಯಚೂರು, ಬಾಗಲಕೋಟೆ, ಕೊಪ್ಪಳ, ಧಾರವಾಡ, ಗದಗ, ಬಳ್ಳಾರಿ, ವಿಜಯನಗರ, ಹಾವೇರಿ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿಯೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ನಿನ್ನೆ ಸುರಿದ ಭಾರೀ ಮಳೆಯಿಂದ ಉಂಟಾದ ಅವಾಂತರಗಳ ಹಿನ್ನೆಲೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ನಗರದ ಮ್ಯಾನ್‌ಹೋಲ್‌ಗಳು ಬ್ಲಾಕ್ ಆಗಿದ್ರೆ ತಕ್ಷಣ ದುರಸ್ತಿ ಮಾಡಲು ಹಾಗೂ ಅಪಾಯಕಾರಿಯಾಗಿ ತೂಗುತಿರುವ ಮರದ ಕೊಂಬೆಗಳನ್ನು ತೆರವುಗೊಳಿಸಲು ಜಿಬಿಎ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜೊತೆಗೆ ಈಗಾಗಲೇ ಬಿದ್ದಿರುವ ಮರದ ಕೊಂಬೆಗಳನ್ನು ತೆರವು ಮಾಡಿ ಸಂಚಾರ ಸುಗಮಗೊಳಿಸಲು, ಅಂಡರ್‌ಪಾಸ್‌ಗಳಲ್ಲಿ ನೀರು ನಿಲ್ಲದಂತೆ ಸರಾಗವಾಗಿ ಹರಿಯುವ ವ್ಯವಸ್ಥೆ ಕಲ್ಪಿಸಲು ಹಾಗೂ ಪ್ರಮುಖ ರಸ್ತೆಗಳಲ್ಲಿ ನೀರು ನಿಂತುಕೊಳ್ಳದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಚಿಸಿದ್ದು, ಬೌರಿಂಗ್ ಆಸ್ಪತ್ರೆ ರೀತಿಯ ದುರ್ಘಟನೆ ಮರುಕಳಿಸದಂತೆ ವಿಶೇಷ ಎಚ್ಚರಿಕೆ ವಹಿಸುವಂತೆ ತಿಳಿಸಿದ್ದಾರೆ.