ಬೆಂಗಳೂರು: ಸಚಿವ ಜಮೀರ್ ಅಹ್ಮದ್ (Zameer Ahmed) ಅವರ ಮನೆಗೆ ಕನ್ನ ಹಾಕಿ ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ (Gold Theft) ದೋಚಿದ್ದ ಇಬ್ಬರು ಆರೋಪಿಗಳನ್ನು ಶಿವಾಜಿನಗರ ಪೊಲೀಸರು (Shivajinagar Police) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಅಮೀರ್ ಅಹ್ಮದ್ ಮತ್ತು ಅವೀನ್ ಎಂದು ಗುರುತಿಸಲಾಗಿದೆ.
ಮೂಲಗಳ ಪ್ರಕಾರ, ಸಚಿವ ಜಮೀರ್ ಅವರ ಮನೆಯಲ್ಲಿ ಕಳೆದ ಮೂರು ವರ್ಷಗಳಿಂದ ಹಂತ ಹಂತವಾಗಿ ಸುಮಾರು 1 ಕೆಜಿ 200 ಗ್ರಾಂ ಚಿನ್ನಾಭರಣವನ್ನು ಕದ್ದಿರುವುದು ಬೆಳಕಿಗೆ ಬಂದಿದೆ. ಆರೋಗ್ಯ ವಿಚಾರಿಸುವ ನೆಪದಲ್ಲಿ ಪದೇಪದೇ ಮನೆಗೆ ಬರುತ್ತಿದ್ದ ಅಮೀರ್, 2023ರಿಂದ ಈ ಕೃತ್ಯವನ್ನು ನಿರಂತರವಾಗಿ ನಡೆಸುತ್ತಿದ್ದನೆಂದು ತಿಳಿದು ಬಂದಿದೆ.
ಅಮೀರ್ ಮತ್ತು ಅವೀನ್ ಟ್ರಾವೆಲ್ಸ್ ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದರಿಂದ ಈ ಕೃತ್ಯಕ್ಕೆ ಮುಂದಾಗಿದ್ದಾರೆ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಕದ್ದ ಚಿನ್ನಾಭರಣದ ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿ ಲಾಭ ಪಡೆಯುವ ಯೋಜನೆ ಹೊಂದಿದ್ದರು ಎಂಬ ಮಾಹಿತಿಯೂ ಹೊರಬಂದಿದೆ.
ಸಚಿವರ ಮನೆಯಿಂದ ಕರೆ ಮಾಡಿದಾಗ ರಿಸೀವ್ ಮಾಡದ ಹಿನ್ನೆಲೆಯಲ್ಲಿ ಇಬ್ಬರ ಮೇಲೆ ಅನುಮಾನ ಮೂಡಿದ್ದು, ನಂತರ ಪೊಲೀಸರ ವಿಚಾರಣೆಯಲ್ಲಿ ಕಳ್ಳತನದ ಸಂಪೂರ್ಣ ಕೃತ್ಯ ಬಹಿರಂಗವಾಗಿದೆ.
ಈ ಸಂಬಂಧ ಸಚಿವ ಜಮೀರ್ ಅಹ್ಮದ್ ಅವರ ತಾಯಿ ನೀಡಿದ ದೂರಿನ ಆಧಾರದ ಮೇಲೆ ಶಿವಾಜಿನಗರ ಪೊಲೀಸರು ತನಿಖೆ ನಡೆಸಿ ಇಬ್ಬರನ್ನೂ ಬಂಧಿಸಿದ್ದಾರೆ.