ರಾಮನಗರ: ಮನೆ ಪಕ್ಕ ಬೆಳೆದಿದ್ದ ತರಕಾರಿ (Vegetables) ಗಿಡಗಳನ್ನು ದನ (Cow) ಮೇಯಿಸಿದ ವಿಚಾರಕ್ಕೆ ಉಂಟಾದ ಗಲಾಟೆ ಮಹಿಳೆಯ ಸಾವಿನಲ್ಲಿ ಅಂತ್ಯಗೊಂಡಿರುವ ಘಟನೆ ರಾಮನಗರ (Ramanagara) ಟೌನ್ ವ್ಯಾಪ್ತಿಯ ಬಾಲಗೇರಿಯಲ್ಲಿ ನಡೆದಿದೆ. ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಜಯಮ್ಮ (55) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಪಕ್ಕದ ಮನೆಯ ಶ್ರೀನಿವಾಸ್ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ.
ಜಯಮ್ಮ ಮತ್ತು ಶ್ರೀನಿವಾಸ್ ಅಕ್ಕಪಕ್ಕದ ನಿವಾಸಿಗಳಾಗಿದ್ದು, ಮನೆ ಪಕ್ಕ ಬೆಳೆದಿದ್ದ ತರಕಾರಿ ಗಿಡಗಳನ್ನು ಶ್ರೀನಿವಾಸ್‌ಗೆ ಸೇರಿದ ಹಸು ಮೇಯ್ದಿತ್ತು ಎನ್ನುವ ಕಾರಣಕ್ಕೆ ಎರಡು ಕುಟುಂಬಗಳ ನಡುವೆ ವಾಗ್ವಾದ ಆರಂಭವಾಗಿತ್ತು. ಗಲಾಟೆ ತೀವ್ರಗೊಂಡ ವೇಳೆ ಶ್ರೀನಿವಾಸ್ ಜಯಮ್ಮಗೆ ಕಪಾಳಕ್ಕೆ ಹೊಡೆದಿದ್ದಾನೆ ಎನ್ನಲಾಗಿದೆ.
ಹಲ್ಲೆಯಿಂದ ಜಯಮ್ಮ ಪ್ರಜ್ಞೆ ತಪ್ಪಿ ಬಿದ್ದ ಹಿನ್ನೆಲೆ ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜಯಮ್ಮ ಮೃತಪಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶ್ರೀನಿವಾಸ್‌ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.