ಭೋಪಾಲ್: ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಸಾವನ್ನಪ್ಪಿದ ನಟಿ ತ್ವಿಶಾ ಶರ್ಮಾ ಪ್ರಕರಣದ ಪ್ರಮುಖ ಸಾಕ್ಷಿಯೊಬ್ಬರ ಮೇಲೆ ಆರೋಪಿ ಪತಿ ಸಮರ್ಥ್ ಸಿಂಗ್‌ನ ಆಪ್ತರು ದಾಳಿ ನಡೆಸಿರುವ ಘಟನೆ ಭೋಪಾಲ್‌ನಲ್ಲಿ ಬೆಳಕಿಗೆ ಬಂದಿದೆ.
ಸಮರ್ಥ್ ಸಿಂಗ್ ನಿವಾಸದ ಸಮೀಪ ಸಲೂನ್ ನಡೆಸುತ್ತಿದ್ದ ನೀರಜ್ ದುಬೆ ಮೇಲೆ ಮೇ 30ರಂದು ಹಲ್ಲೆ ನಡೆದಿದ್ದು, ನ್ಯಾಯಾಲಯದಲ್ಲಿ ಸಾಕ್ಷ್ಯ ನೀಡಬಾರದೆಂದು ಬೆದರಿಕೆ ಹಾಕಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಹಲ್ಲೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿಡಿಯೋದಲ್ಲಿ ನಾಲ್ವರು-ಐವರು ಸೇರಿ ನೀರಜ್ ದುಬೆ ಅವರನ್ನು ಸುತ್ತುವರಿದು ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ. ಆತ ಆತ್ಮರಕ್ಷಣೆಗಾಗಿ ಪ್ರಯತ್ನಿಸುತ್ತಿರುವ ದೃಶ್ಯವೂ ದಾಖಲಾಗಿದೆ.
ಘಟನೆಯ ಬಳಿಕ ನೀರಜ್ ದುಬೆ ಕಟಾರಾ ಹಿಲ್ಸ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದು, ತಮ್ಮ ಜೀವಕ್ಕೆ ಅಪಾಯವಿದೆ ಎಂದು ರಕ್ಷಣೆ ಕೋರಿದ್ದಾರೆ. ಪ್ರಕರಣದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಹಲ್ಲೆ ನಡೆಸಿದವರನ್ನು ಗುರುತಿಸಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮೇ 12ರಂದು ತ್ವಿಶಾ ಶರ್ಮಾ ಅತ್ತೆಯ ಮನೆಯಲ್ಲಿ ಅನುಮಾನಾಸ್ಪದವಾಗಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಬಳಿಕ ಆಕೆಯ ಕುಟುಂಬಸ್ಥರು ಪತಿ ಸಮರ್ಥ್ ಸಿಂಗ್ ಹಾಗೂ ಅತ್ತೆ, ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ ತ್ವಿಶಾ ಪತಿ ಮತ್ತು ಅತ್ತೆಯನ್ನು ಪೊಲೀಸರು ಬಂಧಿಸಿದ್ದು, ಘಟನೆಯ ಮರುಸೃಷ್ಟಿಗಾಗಿ ಆರೋಪಿಗಳನ್ನು ಅಪರಾಧ ನಡೆದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು.