ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸಚಿವ ಸಂಪುಟ ಉಪಸಮಿತಿ ಕರ್ನಾಟಕದಲ್ಲಿ ಭಾರಿ ಹೂಡಿಕೆ ಮಾಡಲು ಯೋಜಿಸಿರುವ 13 ಕಂಪನಿಗಳಿಗೆ ಹೆಚ್ಚುವರಿ ಪ್ರೋತ್ಸಾಹಕಗಳನ್ನು ನೀಡುವ ಕುರಿತು ಚರ್ಚೆ ನಡೆಸಿದೆ. ಕಂಪನಿಗಳ ಬೇಡಿಕೆಗಳ ಆಧಾರದ ಮೇಲೆ ಪ್ರೋತ್ಸಾಹಕಗಳನ್ನು ನೀಡುವ ಕಾರ್ಯವನ್ನು ಈ ಉಪಸಮಿತಿ ನಿರ್ವಹಿಸುತ್ತದೆ.
ಮೂಲಗಳ ಪ್ರಕಾರ, ಸರ್ಕಾರದ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಬೀಳದಂತೆ ಕಂಪನಿ ಮತ್ತು ಸರ್ಕಾರ ಎರಡಕ್ಕೂ ಲಾಭವಾಗುವ ‘ವಿನ್-ವಿನ್’ ಪರಿಹಾರ ಕಂಡುಹಿಡಿಯಲು ಪ್ರತಿಯೊಂದು ಕಂಪನಿಯೊಂದಿಗೆ ಅಧಿಕಾರಿಗಳು ಪ್ರತ್ಯೇಕವಾಗಿ ಮಾತುಕತೆ ನಡೆಸಬೇಕು ಎಂದು ಉಪಸಮಿತಿ ಸೂಚಿಸಿದೆ.
ಕೆಲವು ಕಂಪನಿಗಳು ಶೇ.40ರವರೆಗೆ ಹೆಚ್ಚುವರಿ ಪ್ರೋತ್ಸಾಹಕಗಳನ್ನು ಕೇಳಿದ್ದು, ಅದನ್ನು ಶೇ.35ಕ್ಕೆ ಅಥವಾ ಕೆಲ ಸಂದರ್ಭಗಳಲ್ಲಿ ಶೇ.20–25ಕ್ಕೆ ಇಳಿಸಬಹುದೇ ಎಂಬುದನ್ನು ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆದರೆ, ರಾಜ್ಯಕ್ಕೆ ಈ ಹೂಡಿಕೆಗಳಿಂದ ದೊರೆಯುವ ಲಾಭವನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಪ್ರಸ್ತಾವಗಳನ್ನು ತಿರಸ್ಕರಿಸಲಾಗಿಲ್ಲ.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕಂಪನಿಗಳು ಕನ್ನಡಿಗರಿಗೆ ಉದ್ಯೋಗ ನೀಡುವಲ್ಲಿ ಆದ್ಯತೆ ನೀಡಬೇಕೆಂದು ಸ್ಪಷ್ಟವಾಗಿ ಒತ್ತಾಯಿಸಿದ್ದಾರೆ.