ಬೆಂಗಳೂರು: ಸಿಲಿಕಾನ್ ಸಿಟಿ ಡ್ರಗ್ಸ್ ಹಬ್ ಆಗ್ತಿದೆಯಾ ಎನ್ನುವ ಅನುಮಾನಗಳು ಹೆಚ್ಚಾಗುತ್ತಿವೆ. ಕಳೆದ 15 ದಿನಗಳಲ್ಲಿ ನಗರದ ವಿವಿಧ ಭಾಗಗಳಲ್ಲಿ ₹65 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಆಗಿರುವುದು ಆತಂಕಕ್ಕೆ ಕಾರಣವಾಗಿದೆ.
ಪೊಲೀಸರು ಎಷ್ಟೇ ಎಚ್ಚರಿಕೆಯಿಂದ ಕೆಲಸ ಮಾಡಿದರೂ ನಗರದಲ್ಲಿ ಡ್ರಗ್ಸ್ ಸರಬರಾಜು ಕಡಿಮೆಯಾಗುತ್ತಿಲ್ಲ. ಇಷ್ಟು ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ನಗರಕ್ಕೆ ಬರುತ್ತಿರುವ ಮೂಲ ಏನು ಎಂಬುದನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ. ಹಲವು ರೇಡ್‌ಗಳು ನಡೆದರೂ ಕೋಟ್ಯಾಂತರ ಮೌಲ್ಯದ ಮಾದಕ ವಸ್ತುಗಳು ಸಿಕ್ಕಿಬಿದ್ದರೂ ಸರಬರಾಜು ನಿಲ್ಲದೇ ಇರುವುದು ಪೊಲೀಸರ ಚಿಂತೆಗೆ ಕಾರಣವಾಗಿದೆ.
ತನಿಖೆಯ ವೇಳೆ ದೇಶದ ವಿವಿಧ ಭಾಗಗಳಿಂದ ಬೆಂಗಳೂರಿಗೆ ಡ್ರಗ್ಸ್ ಹರಿದು ಬರುತ್ತಿರುವುದು ಬೆಳಕಿಗೆ ಬಂದಿದೆ. ದೆಹಲಿಯಿಂದ ಎಂಡಿಎಂಎ, ಆಂಧ್ರ ಪ್ರದೇಶದ ವಿಶಾಖಪಟ್ಟಣ ಮತ್ತು ಅರಕು ಕಣಿವೆಯಿಂದ ಗಾಂಜಾ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿರುವುದು ಪತ್ತೆಯಾಗಿದೆ. ಇತ್ತ ಡ್ರಗ್ ಸಾಗಾಟವನ್ನು ತಡೆಯಲು ಬೆಂಗಳೂರು ಪೊಲೀಸರು ಕೂಡ ತೀವ್ರ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ನಿರಂತರ ಕಾರ್ಯಾಚರಣೆ ಮುಂದುವರಿಸಿದ್ದಾರೆ.