ಸಿರುಗುಪ್ಪ: 22:ನಗರದ ಅಭಯಾಂಜನೇಯ ಸ್ವಾಮಿ ದೇವಸ್ಥಾನದ ಪಕ್ಕದ ಕಾಲೋನಿ ರಸ್ತೆಯ ಮೂಲಕ ಸಿಂಧನೂರು ಕಡೆಗೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಪಡಿತರ ಅಕ್ಕಿಯನ್ನು ಅಧಿಕಾರಿಗಳು ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ.
ಟಾಟಾ ಕಂಪನಿಯ ಗೂಡ್ಸ್ ವಾಹನದಲ್ಲಿ ಸುಮಾರು 1,850 ಕೆಜಿ (18.50 ಕ್ವಿಂಟಲ್) ಪಡಿತರ ಅಕ್ಕಿಯನ್ನು ಸಾಗಿಸಲಾಗುತ್ತಿತ್ತು. ಇದರ ಅಂದಾಜು ಮೌಲ್ಯ 42,500 ರೂಪಾಯಿಗಳೆಂದು ತಿಳಿದುಬಂದಿದೆ.
ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಸ್ಥಳೀಯ ಆಹಾರ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ವಾಹನ ಸಹಿತ ಅಕ್ಕಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸಂಬಂಧ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.