ಕೊಪ್ಪಳ, ಅ. 29: ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹುಲಿಗೆಮ್ಮ ದೇವಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಯ ವಿರುದ್ಧ ಅಸ್ಪೃಶ್ಯತೆ ಆಚರಣೆ ಹಾಗೂ ಭಕ್ತರಿಗೆ ದೇವರ ದರ್ಶನಕ್ಕೆ ಅಡ್ಡಿಪಡಿಸಿದ ಆರೋಪದಡಿ ಶಿಸ್ತು ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಮುನಿರಾಬಾದ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಪ್ರಕಾಶ್ ಹೊಳೆಯಪ್ಪನವರ್ ತಿಳಿಸಿದ್ದಾರೆ.
ಅವರು ಗುರುವಾರ ಇಲ್ಲಿನ ಪತ್ರಿಕಾ ಭವನದಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುನಿರಾಬಾದ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅವರಿಗೆ ಲಿಖಿತ ದೂರು ಸಲ್ಲಿಸಲಾಗಿದೆ ಎಂದರು. ಕಲ್ಯಾಣ ಕರ್ನಾಟಕ ಭಾಗದ ಭಕ್ತಾದಿಗಳ ಆರಾಧ್ಯ ದೇವತೆಯಾದ ಶ್ರೀ ಹುಲಿಗೆಮ್ಮ ದೇವಸ್ಥಾನಕ್ಕೆ ಸೀಗೆಹುಣ್ಣಿಮೆಯ ವಿಶೇಷ ದಿನದಂದು (ಅಕ್ಟೋಬರ್ 26, 2026) ದರ್ಶನಕ್ಕೆ ಆಗಮಿಸಿದ್ದ ಮಾದಿಗ ಸಮುದಾಯದ ಭಕ್ತರಿಗೆ ಕಾರ್ಯನಿರ್ವಾಹಕ ಅಧಿಕಾರಿಯು ಉದ್ದೇಶಪೂರ್ವಕವಾಗಿ ದೇವಸ್ಥಾನದ ಬಾಗಿಲು ಮುಚ್ಚಿಸಿ ದರ್ಶನಕ್ಕೆ ಅವಕಾಶ ನೀಡದೆ ತಡೆದಿದ್ದಾರೆ ಎಂದು ಅವರು ಆರೋಪಿಸಿದರು.
ಮುಂದುವರಿದು ಮಾತನಾಡಿ, ಹಿಂದೆಯೂ ಇದೇ ರೀತಿ ನಡೆದುಕೊಂಡಿದ್ದ ಅಧಿಕಾರಿ, ಕಳೆದ ಸುಮಾರು ಒಂದೂವರೆ ವರ್ಷಗಳಿಂದಲೂ ಪ್ರತಿ ಹುಣ್ಣಿಮೆಯಂದು ಸಾರ್ವಜನಿಕ ಧಾರ್ಮಿಕ ಹಕ್ಕಿಗೆ ಅಡ್ಡಿಪಡಿಸುತ್ತಿದ್ದು, ಉದ್ದೇಶಪೂರ್ವಕವಾಗಿ ಅಸ್ಪೃಶ್ಯತೆಯನ್ನು ಜೀವಂತವಾಗಿಡುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಅರ್ಜಿದಾರರು ದೂರಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಸಚಿವರ ಗಮನಕ್ಕೂ ತರಲಾಗಿದ್ದರೂ ಯಾವುದೇ ಬದಲಾವಣೆಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಘಟನೆಯು ಸಾರ್ವಜನಿಕವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಅಸ್ಪೃಶ್ಯತೆ ಆಚರಿಸುತ್ತಿರುವ ಹುಲಿಗೆಮ್ಮ ದೇವಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಯ ಮೇಲೆ ತಕ್ಷಣವೇ ಶಿಸ್ತಿನ ಕಾನೂನು ಕ್ರಮ ಜರುಗಿಸಿ ಎಫ್ಐಆರ್ ದಾಖಲಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ. ಈ ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಮಂಜುನಾಥ್ ಕೋಳೂರು, ನಾಗರಾಜ ಪೂಜಾರ, ಮಾರ್ಕಂಡಪ್ಪ ಮತ್ತು ಯಮನೂರಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.