ಕೊಪ್ಪಳ : ನಗರದ ಸಾರ್ವಜನಿಕರ ಜೀವನಕ್ಕೆ ಮಾರಕವಾಗಿರುವ, ನಗರದ ಹೊರವಲಯದಲ್ಲಿ ಸ್ಥಾಪನೆಗೊಳ್ಳುತ್ತಿರುವ ಎಂ.ಎಸ್.ಪಿ.ಎಲ್. ಬಲದೋಟ ಕಾರ್ಖಾನೆ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಕಳೆದ ಸುಮಾರು ಒಂದು ವರ್ಷದಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಹಾಗೂ ಅಕ್ಟೋಬರ್ 31 ರಿಂದ ನವೆಂಬರ್ 1 ರ ವರೆಗೆ ನಡೆಯಲಿರುವ 48 ಗಂಟೆಗಳ ಕಾಲದ ಕೊಪ್ಪಳ ಮತ್ತು ಭಾಗ್ಯನಗರ ಬಂದ್ ಹೋರಾಟಕ್ಕೆ ಹೈದರಾಬಾದ್ ಕರ್ನಾಟಕ ಯುವಶಕ್ತಿ ಸಂಪೂರ್ಣ ಬೆಂಬಲ ನೀಡಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಬಸವರಾಜ ಎಸ್. ಗಾಣಿಗೇರ್ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಗುರುವಾರ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದರು. ಹೈದರಾಬಾದ್ ಕರ್ನಾಟಕ ಹಾಗೂ ಈಗಿನ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ಜಾರಿಯಲ್ಲಿರುವ ಆರ್ಟಿಕಲ್ 371 (ಜೆ) ಕಲಂ ಇನ್ನೂ ನಮ್ಮ ಪ್ರದೇಶದಲ್ಲಿ ಸರಿಯಾಗಿ ಅನುಷ್ಠಾನಗೊಂಡಿಲ್ಲ ಮತ್ತು ಇದರ ಲಾಭ ಇಲ್ಲಿಯ ಜನರಿಗೆ ಸಮಂಜಸವಾದ ರೀತಿಯಲ್ಲಿ ಸಿಕ್ಕಿಲ್ಲ. ಇಂತಹ ಸಂದರ್ಭದಲ್ಲಿ ನಮ್ಮ ಪ್ರದೇಶದ ಗಡಿಭಾಗದ ಬೇರೆ ಬೇರೆ ಜಿಲ್ಲೆಗಳಲ್ಲಿ ಇದನ್ನು ಅನುಷ್ಠಾನಗೊಳಿಸುವಂತೆ ಕೆಲ ರಾಜಕೀಯ ಮುಖಂಡರು ಹಾಗೂ ಜನಪ್ರತಿನಿಧಿಗಳು ತಮ್ಮ ಹೇಳಿಕೆಗಳನ್ನು ನೀಡುವುದು ಸಮಂಜಸವಲ್ಲ. ಇಂತಹ ಹೇಳಿಕೆಯನ್ನು ನಾವು ಖಂಡಿಸುತ್ತೇವೆ. ನಿಮ್ಮ ಈ ವರ್ತನೆ ಮುಂದುವರಿದರೆ ನಮಗೆ ಕಲ್ಯಾಣ ಕರ್ನಾಟಕ ಪ್ರದೇಶ ಪ್ರತ್ಯೇಕ ರಾಜ್ಯ ಬೇಕೆಂಬ ಕೂಗು ಮತ್ತು ಹೋರಾಟ ನಡೆಸಲಾಗುವುದು ಎಂದು ಹೈದರಾಬಾದ್ ಕರ್ನಾಟಕ ಯುವಶಕ್ತಿ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಗಾಣಿಗೇರ್ ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಕಿರಣ್ ಜ್ಯೋತಿ ಮತ್ತು ಪ್ರಧಾನ ಕಾರ್ಯದರ್ಶಿ ಆಭಿದ್ ಮುಲ್ಲಾ ಉಪಸ್ಥಿತರಿದ್ದರು.