ಕೊಪ್ಪಳ, ಅಕ್ಟೋಬರ್ 29, : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ ಗುರುವಾರ (ಅ. 29ರಂದು) ಕೊಪ್ಪಳ ತಾಲ್ಲೂಕಿನ ಬೂದಗುಂಪಾ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ “ಸುರಕ್ಷಿತ ಬಚಪನ್ ಅಭಿಯಾನದ” ಅಂಗವಾಗಿ ಮಕ್ಕಳ ಹಕ್ಕುಗಳು ಮತ್ತು ಕಾನೂನುಗಳ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಸಿಂಧು ಅಂಗಡಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿ, ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳನ್ನು ತಡೆಗಟ್ಟಲು ಸರಕಾರವು ವಿವಿಧ ಕಾನೂನುಗಳನ್ನು ಜಾರಿಯಲ್ಲಿ ತಂದಿರುತ್ತದೆ. ಅವುಗಳಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012 ತಿದ್ದುಪಡಿ-2019 ಪ್ರಮುಖವಾದದ್ದು, ಜಿಲ್ಲೆಯ ಕೆಲವು ಮಕ್ಕಳು ಕುಟುಂಬ, ಸ್ನೇಹಿತರ ಅಥವಾ ಸಾಮಾಜಿಕ ಮಾಧ್ಯಮಗಳ ಪ್ರಭಾವದಿಂದ ಪ್ರೀತಿ, ಪ್ರೇಮದ ಹೆಸರಿನಲ್ಲಿ ತಿಳಿದೊ, ತಿಳಿಯದೆಯೋ ಸಿಲುಕಿ, ಕಾನೂನಿನಡಿಯಲ್ಲಿ ಭಾದಿತರಾಗಿ ಅಥವಾ ಕಾನೂನಿನೊಡನೆ ಸಂಘರ್ಷದಲ್ಲಿದ್ದಾರೆ. ಈ ಕಾಯ್ದೆಯನ್ವಯ 18 ವರ್ಷದೊಳಗಿನ ಮಕ್ಕಳ ಮೇಲಿನ ಬೇಧಕ ಲೈಂಗಿಕ ಹಲ್ಲೆಗೆ ಕನಿಷ್ಠ 20 ವರ್ಷಗಳಿಂದ ಅಜೀವ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದಾಗಿದೆ. ಲೈಂಗಿಕ ಕಿರುಕುಳ ಅಂದರೆ ಮಕ್ಕಳಿಗೆ ಶಾಬ್ಧಿಕ, ಆಂಗಿಕ, ಭಾಷಿಕ ಹಾಗೂ ಲಿಖಿತವಾಗಿ ಅವರ ಘನತೆಗೆ ಧಕ್ಕೆ ಉಂಟು ಮಾಡಬಹುದಾದ ಯಾವುದೇ ಈ ರೀತಿಯ ಕೃತ್ಯಗಳಿಗೆ 07 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಬಹುದಾಗಿದೆ. ಈ ರೀತಿಯ ಕೃತ್ಯಗಳಿಗೆ ಸಹಾಯ, ಪ್ರೋತ್ಸಾಹ ಮತ್ತು ಪ್ರಯತ್ನ ಪಟ್ಟವರಿಗೂ ಅಷ್ಟೇ ಪ್ರಮಾಣದ ಶಿಕ್ಷೆಯನ್ನು ವಿಧಿಸಬಹುದಾಗಿದೆ ಎಂದರು.
ಸರಕಾರವು ಬಾಲ್ಯವಿವಾಹವನ್ನು ನಿಷೇಧಿಸಿ, ಬಾಲ್ಯವಿವಾಹ ನಿಷೇಧ ಕಾಯ್ದೆ-2006ನ್ನು ಜಾರಿಗೊಳಿಸಿದೆ, ರಾಜ್ಯವನ್ನು ಬಾಲ್ಯವಿವಾಹ ಮುಕ್ತ ರಾಜ್ಯವನ್ನಾಗಿಸಲು ಕರ್ನಾಟಕ ರಾಜ್ಯ ಸರಕಾರವು ತಿದ್ದುಪಡಿಯನ್ನು ತಂದಿದ್ದು ಅದರನ್ವಯ ರಾಜ್ಯದಲ್ಲಿ ಬಾಲ್ಯವಿವಾಹಗಳು ಅಸಿಂಧು ವಿವಾಹಗಳಾಗಿದ್ದು, ಕಾನೂನಿನ ಮಾನ್ಯತೆಯಿರುವುದಿಲ್ಲ. ಜಿಲ್ಲೆಯಲ್ಲಿ ಪಾಲಕರು ತಮ್ಮ ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಮದುವೆಯನ್ನು ಮಾಡುತ್ತಿರುವುದು ಕಂಡುಬAದಿರುತ್ತದೆ. ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಮದುವೆಯಾದ ಪ್ರಾಪ್ತ ಪುರುಷ, ಬಾಲ್ಯವಿವಾಹವನ್ನು ಮಾಡುವವರು, ಭಾಗವಹಿಸುವವರು, ಆಯೋಜಿಸುವವರು ಎಲ್ಲರಿಗೂ ಕನಿಷ್ಠ 1 ವರ್ಷದಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ರೂ. 1 ಲಕ್ಷ ದಂಡವನ್ನು ವಿಧಿಸಬಹುದಾಗಿದೆ. ಆದ್ದರಿಂದ ಬಾಲ್ಯವಿವಾಹಗಳನ್ನು ಮಾಡಬೇಡಿ, ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಸಹಕರಿಸಿ ಎಂದು ಅವರು ತಿಳಿಸಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ (ಅಸಾಂಸ್ಥಿಕ) ರವಿ ಬಡಿಗೇರ ಅವರು ಮಾತನಾಡಿ, "ರಾಜ್ಯದಲ್ಲಿ ನವೆಂಬರ್ ಮಾಸವನ್ನು ‘ದತ್ತು ಜಾಗೃತಿ ಮಾಸ’ವನ್ನಾಗಿ ಆಚರಿಸಲಾಗುತ್ತಿದೆ. ಬೇಡವಾದ ಮಕ್ಕಳನ್ನು ರಸ್ತೆ ಬದಿ, ಕಸದ ತೊಟ್ಟಿ ಅಥವಾ ದೇವಸ್ಥಾನಗಳಲ್ಲಿ ಎಸೆಯುವುದು ಶಿಕ್ಷಾರ್ಹ ಅಪರಾಧ ಹಾಗೂ ಅಮಾನವೀಯ ಕೃತ್ಯ. ಪೋಷಣೆ ಮತ್ತು ರಕ್ಷಣೆ ಅಗತ್ಯವಿರುವ ಮಕ್ಕಳು ಕಂಡುಬAದರೆ ತಕ್ಷಣ ಮಕ್ಕಳ ಸಹಾಯವಾಣಿ 1098 ಅಥವಾ 112ಗೆ ಕರೆ ಮಾಡಿ ಮಾಹಿತಿ ನೀಡಬೇಕು. ಅಂತಹ ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದರೆ, ಕಾನೂನುಬದ್ಧವಾಗಿ ದತ್ತು ನೀಡುವ ಮೂಲಕ ಮಗುವಿಗೆ ಸುಭದ್ರ ಬದುಕು ಕಲ್ಪಿಸಲಾಗುವುದು. ಮಗುವನ್ನು ಒಪ್ಪಿಸುವ ಪೋಷಕರ ವಿವರಗಳನ್ನು ಸಂಪೂರ್ಣ ಗೌಪ್ಯವಾಗಿಡಲಾಗುವುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಗುರುರಾಜ ಚಕ್ರಸಾಲಿ ವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯೆ ಪ್ರತಿಭಾ ಕಾಶಿಮಠ, ಮಕ್ಕಳ ಸಹಾಯವಾಣಿ ಸಂಯೋಜಕ ಶರಣಪ್ಪ ಸಿಂಗನಾಳ, ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾವೇರಿ ಸಂಗಟಿ ಪ್ರಾರ್ಥಿಸಿದರು, ಸಹ ಶಿಕ್ಷಕಿ ಲಕ್ಷö್ಮವ್ವ ವಂದಿಸಿದರು.