ಕೊಪ್ಪಳ: ಸನಾತನ ಧರ್ಮದ ಉಳಿವಿಗಾಗಿ ಹಾಗೂ ಭಾರತೀಯ ಸಂಸ್ಕೃತಿಯ ರಕ್ಷಣೆಗಾಗಿ 'ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶ'ವನ್ನು ನವೆಂಬರ್ 03ರ ಮಂಗಳವಾರ ಸಂಜೆ 4 ಗಂಟೆಗೆ ಗಂಗಾವತಿಯ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಾವೇಶ ಆಚರಣೆ ಸಮಿತಿಯ ಪ್ರಮುಖರು ಹಾಗೂ ಕುಕನೂರಿನ ಶ್ರೀ ಅನ್ನದಾನೀಶ್ವರ ಶಾಖಾ ಮಠದ ಪರಮಪೂಜ್ಯ ಡಾ. ಮಹಾದೇವ ದೇವರು ಮಹಾಸ್ವಾಮೀಜಿಯವರು ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಲ್ಹಾಪುರದ ಕನೇರಿ ಮಠದ ಪರಮಪೂಜ್ಯ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಮಹಾಸ್ವಾಮಿಗಳವರ ದಿವ್ಯ ನೇತೃತ್ವದಲ್ಲಿ ಈ ಧರ್ಮ ರಕ್ಷಣೆಯ ಮಹಾಸಂಕಲ್ಪ ಸಭೆ ಜರುಗಲಿದೆ. ಈ ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚು ಪರಮಪೂಜ್ಯ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯವಿರಲಿದೆ ಎಂದು ವಿವರಿಸಿದರು.
ಮುಂದುವರಿದು ಮಾತನಾಡುತ್ತ, "ಜಾತಿ-ಮತಗಳ ಭೇದ ಮರೆತು ಹಿಂದೂ ಧರ್ಮದ ಏಕತೆಗಾಗಿ ಕೈಜೋಡಿಸಿ, ಈ ಮಹಾಸಭೆಯಲ್ಲಿ ಧರ್ಮ ರಕ್ಷಣೆಯ ಮಹಾಸಂಕಲ್ಪವನ್ನು ಕೈಗೊಳ್ಳಲು ಸಮಸ್ತ ಸಾರ್ವಜನಿಕರಿಗೆ ಆತ್ಮೀಯ ಆಹ್ವಾನ ನೀಡಲಾಗಿದೆ" ಎಂದು ಕುಕನೂರಿನ ಶ್ರೀ ಅನ್ನದಾನೀಶ್ವರ ಶಾಖಾ ಮಠದ ಪರಮಪೂಜ್ಯ ಡಾ. ಮಹಾದೇವ ದೇವರು ಮಹಾಸ್ವಾಮೀಜಿಯವರು ಭಕ್ತ ಸಮೂಹ ಹಾಗೂ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮ ಆಚರಣಾ ಸಮಿತಿಯ ಮುಖ್ಯಸ್ಥರಾದ ಕನೇರಿ ಮಠದ ಪರಮಪೂಜ್ಯ ಕುಮಾರ ದೇವರು, ದ್ದೆಗಲ್ ಮಠದ ಪರಮಪೂಜ್ಯ ಆತ್ಮಾನಂದ ಭಾರತಿ ಸ್ವಾಮೀಜಿಯವರು ಹಾಗೂ ಗಿಣಿಗೇರಿ ಮಠದ ಮಹಾಸ್ವಾಮೀಜಿಗಳು, ಅಲ್ಲದೆ ನಾಗಭೂಷಣ ಸಾಲಿಮಠ ಮತ್ತು ಹಿರಿಯ ಹೋರಾಟಗಾರ ಎಂ.ಬಿ. ಅಳವಂಡಿ ಅವರು ಪಾಲ್ಗೊಂಡಿದ್ದರು.