ಜಮಖಂಡಿ: ನಮ್ಮ ಸಹಕಾರಿ ಸಂಘದ ಮೇಲೆ ಗ್ರಾಹಕರಿಗೆ ಅಚಲವಾದ ನಂಬಿಕೆ ಇದೆ. ಕಳೆದ ೮ ವರ್ಷಗಳಲ್ಲಿ ಅತ್ಯಂತ ತೀವ್ರಗತಿಯಲ್ಲಿ ಪ್ರಗತಿ ಸಾಧಿಸಿದ್ದು, ೨೦೨೫-೨೬ ನೇ ಸಾಲಿಗೆ ಒಟ್ಟು ೫.೦೧ ಕೋಟಿ ಲಾಭ ಗಳಿಸಿದೆ ಎಂದು ಶ್ರೀ ಸಿದ್ದು ನ್ಯಾಮಗೌಡ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.
ಸ್ಥಳೀಯ ರಾಯಲ್ ಪ್ಯಾಲೆಸ್ ಶಾಲೆಯ ಸಭಾಭವನದಲ್ಲಿ ರವಿವಾರದಂದು ಜರುಗಿದ ಶ್ರೀ ಸಿದ್ದು ನ್ಯಾಮಗೌಡ ಸೌಹಾರ್ದ ಸಂಘ ನಿಯಮಿತದ ಎಂಟನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ಸಹಕಾರಿ ಸಂಘವು ೪೪೯ ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ಈಗಾಗಲೇ ೫ ಶಾಖೆಗಳು ಕಾರ್ಯ ನಿರ್ವಹಿಸುತ್ತಿವೆ. ಎಲ್ಲ ಶಾಖೆಗಳು ಲಾಭದಲ್ಲಿದ್ದು, ಲಾಭಾಂಶವನ್ನು ನಮ್ಮ ಸಹಕಾರಿ ಬಂಧುಗಳಿಗೆ ಶೇ. ೨೦% ರಷ್ಟು ಹಂಚಿಕೆ ಮಾಡುತ್ತಿರುವುದು ಸಂತೋಷವೆನಿಸಿದೆ ಎಂದರು.
ಮುಂಬರುವ ದಿನಗಳಲ್ಲಿ ನಮ್ಮ ಸಹಕಾರಿ ಸಂಘ ಇನ್ನಷ್ಟು ಶಾಖೆಗಳನ್ನು ಪ್ರಾರಂಭಿಸುವ ಉದ್ದೇಶ ಹೊಂದಿದ್ದು, ಸಹಕಾರಿ ಬಂಧುಗಳ ಅಭಿಪ್ರಾಯದಂತೆ ಮುಂಬರುವ ವರ್ಷದಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಜೊತೆಗೆ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡಲು ನಮ್ಮ ಸಹಕಾರಿಯು ಕಾರ್ಯೋನ್ಮುಖವಾಗಲಿದೆ ಎಂದು ತಿಳಿಸಿದರು.
ಇದೇ ವೇಳೆ ಕಳೆದ ಜನೆವರಿಯಿಂದ ಕಾರ್ಯಾರಂಭ ಮಾಡಿರುವ ಶ್ರೀ ಎಸ್.ಬಿ.ನ್ಯಾಮಗೌಡ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತದ ಎರಡನೇ ವಾರ್ಷಿಕ ಸರ್ವಸಾಧಾರಣ ಸಭೆಯು ಜರುಗಿತು. ಸಹಕಾರಿ ಸಂಘದ ಆಡಳಿತ ಮಂಡಳಿ ಸದಸ್ಯರು ವೇದಿಕೆ ಮೇಲಿದ್ದರು.
ಸಚೀನ ಜೋಗದಂಡೆ ಪ್ರಾರ್ಥಿಸಿದರು. ಪ್ರವೀಣ ಸೊನ್ನದ ಸ್ವಾಗತಿಸಿದರು. ಶ್ರೀನಿವಾಸ ಕಟ್ಟಿಮನಿ ನಿರೂಪಿಸಿದರು. ಶ್ರೀ ಗುರುಸಿದ್ದಪ್ಪ ಜಂಬಗಿ ವಂದಿಸಿದರು.