ಚಂಡೀಗಢ: ಪಂಜಾಬ್‌ನ (Punjab) ಪಠಾಣ್‌ಕೋಟ್‌ನಲ್ಲಿ ಶಂಕಿತ ಗೂಢಚರ್ಯೆ ಜಾಲವನ್ನು ಪೊಲೀಸರು ಪತ್ತೆಹಚ್ಚಿದ್ದು, ಭಾರತೀಯ ಸೇನೆ ಹಾಗೂ ಅರೆಸೈನಿಕ ಪಡೆಗಳ ಚಲನವಲನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಚಕ್ ಧಾರಿವಾಲ್ ಗ್ರಾಮದ ನಿವಾಸಿ ಬಲ್ಜಿತ್ ಸಿಂಗ್ ಅಲಿಯಾಸ್ ಬಿಟ್ಟು ಬಂಧಿತನಾಗಿದ್ದಾನೆ. ರಾಷ್ಟ್ರೀಯ ಹೆದ್ದಾರಿ-44ರ ಪಠಾಣ್‌ಕೋಟ್–ಜಮ್ಮು ಮಾರ್ಗದ ಸೇತುವೆ ಸಮೀಪದ ಅಂಗಡಿಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಸೇನೆ ಹಾಗೂ ಅರೆಸೈನಿಕ ಪಡೆಗಳ ಚಟುವಟಿಕೆಗಳ ಮೇಲೆ ನಿಗಾ ಇಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಗ್ರಹಿಸಿದ ಕಣ್ಗಾವಲು ಮಾಹಿತಿಯನ್ನು ಪಾಕಿಸ್ತಾನ ಹಾಗೂ ವಿದೇಶದಲ್ಲಿರುವ ಹ್ಯಾಂಡ್ಲರ್‌ಗಳಿಗೆ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಕಳುಹಿಸಲಾಗುತ್ತಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿ ದಲ್ಜಿಂದರ್ ಸಿಂಗ್ ಧಿಲ್ಲೋನ್ ಮಾಹಿತಿ ನೀಡಿದ್ದಾರೆ. ವಿಚಾರಣೆಯ ವೇಳೆ, ಸುಜನ್‌ಪುರ ಸಮೀಪದ ಹೆದ್ದಾರಿ ಅಂಗಡಿಯಲ್ಲಿ ಜನವರಿಯಲ್ಲಿ ಇಂಟರ್ನೆಟ್ ಆಧಾರಿತ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.
ದುಬೈನಲ್ಲಿ ಇರುವ ಅಪರಿಚಿತ ವ್ಯಕ್ತಿಯಿಂದ ಸೂಚನೆಗಳು ಬರುತ್ತಿದ್ದವು ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಕೆಲಸಕ್ಕಾಗಿ ಆರೋಪಿಗೆ ಸುಮಾರು 40 ಸಾವಿರ ರೂ. ಹಣ ನೀಡಲಾಗುತ್ತಿತ್ತು. ಆರೋಪಿಯಿಂದ ಸಿಸಿಟಿವಿ ಕ್ಯಾಮೆರಾ, ವೈಫೈ ರೂಟರ್ ಸೇರಿದಂತೆ ಹಲವು ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪಠಾಣ್‌ಕೋಟ್–ಜಮ್ಮು ಹೆದ್ದಾರಿಯಲ್ಲಿ ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ಗುಪ್ತಚರ ಮಾಹಿತಿ ಲಭಿಸಿದ ಬಳಿಕ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು. ಬಳಿಕ ಸುಜನ್‌ಪುರ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಬಲ್ಜಿತ್ ಸಿಂಗ್ ಜೊತೆಗೆ ವಿಕ್ರಮ್‌ಜಿತ್ ಸಿಂಗ್ ಅಲಿಯಾಸ್ ವಿಕ್ಕಾ, ಬಲ್ವಿಂದರ್ ಸಿಂಗ್ ಅಲಿಯಾಸ್ ವಿಕ್ಕಿ ಹಾಗೂ ತರಣ್‌ಪ್ರೀತ್ ಸಿಂಗ್ ಅಲಿಯಾಸ್ ತನ್ನು ವಿರುದ್ಧವೂ ಎಫ್‌ಐಆರ್ ದಾಖಲಾಗಿದೆ. ಆರೋಪಿಗಳು ಅಪರಾಧ ಹಾಗೂ ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಸಂಪೂರ್ಣ ವಿವರವನ್ನು ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲಾಗಿದ್ದು, ಜಾಲದ ಗಡಿಯಾಚೆಗಿನ ಸಂಪರ್ಕಗಳು ಹಾಗೂ ಹಣಕಾಸಿನ ಮೂಲಗಳ ಬಗ್ಗೆ ತನಿಖೆ ಮುಂದುವರಿದಿದೆ. ಉಳಿದ ಆರೋಪಿಗಳ ಬಂಧನಕ್ಕಾಗಿ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ.