ಬೆಳಗಾವಿ: ನೈಟಿ (Nighty) ಧರಿಸಿದ್ದ ವಿಚಾರಕ್ಕೆ ಗಂಡ (Husband) ತನ್ನ ಹೆಂಡತಿಗೆ (Wife) ಬೆಂಕಿ ಹಚ್ಚಿದ ಶಾಕ್ ಘಟನೆ ಬೆಳಗಾವಿ (Belagavi) ಜಿಲ್ಲೆಯ ಖಾನಾಪುರದ ನಂದಗಡದಲ್ಲಿ ನಡೆದಿದೆ. ಕೃಷ್ಣಾಜಿ ಪಾಟೀಲ್ ಎಂಬಾತ ಪತ್ನಿಗೆ ಬೆಂಕಿ ಹಚ್ಚಿದ ಆರೋಪಿಯಾಗಿದೆ. ಘಟನೆಯಲ್ಲಿ ಮಂಜುಳಾ ಪಾಟೀಲ್ ಗಂಭೀರ ಸುಟ್ಟ ಗಾಯಗಳಾಗಿದ್ದು, ಮೊದಲಿಗೆ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಬಳಿಕ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಗೋವಾಗೆ ಸ್ಥಳಾಂತರಿಸಲಾಗಿದೆ.
ಮಂಜುಳಾ ಹಾಗೂ ಕೃಷ್ಣಾಜಿ ಎಂಟು ವರ್ಷಗಳ ಹಿಂದೆ ವಿವಾಹವಾಗಿದ್ದರು. ಮನೆಯಲ್ಲಿ ಸೀರೆ ಬದಲು ನೈಟಿ ಅಥವಾ ಗೌನ್ ಧರಿಸುವ ವಿಚಾರಕ್ಕೆ ದಂಪತಿಯ ನಡುವೆ ಪದೇಪದೇ ಜಗಳ ನಡೆಯುತ್ತಿತ್ತು. ಈ ವಿಚಾರವೇ ಗಲಾಟೆಗೆ ಕಾರಣವಾಗಿ, ವಾಗ್ವಾದ ತಾರಕ್ಕೇರಿದಾಗ ಪತಿ ಕ್ರೂರ ಕೃತ್ಯಕ್ಕೆ ಕೈ ಹಾಕಿದ್ದಾನೆ ಎಂದು ತಿಳಿದುಬಂದಿದೆ.
ಗಲಾಟೆಯ ಶಬ್ದ ಕೇಳಿ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು, ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಘಟನೆ ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.