ನವದೆಹಲಿ: ಕತ್ತು ಸೀಳಿ ನಿವೃತ್ತ ಆರ್‌ಬಿಐ ಅಧಿಕಾರಿಯನ್ನು (RBI Officer) ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ದೆಹಲಿಯ (New Delhi) ಪಂಚಕುಯಿಯನ್ ಪ್ರದೇಶದಲ್ಲಿ ನಡೆದಿದೆ. ಮಾಧೋ ರಾಮ್ ಕೊಲೆಯಾದ ಅಧಿಕಾರಿ. ಎರಡು ವರ್ಷಗಳ ಹಿಂದೆ ಅವರು ಆರ್‌ಬಿಐ ಅಧಿಕಾರಿ ಹುದ್ದೆಯಿಂದ ನಿವೃತ್ತಿ ಹೊಂದಿದ್ದರು ಎಂದು ತಿಳಿದುಬಂದಿದೆ.
ಕುಟುಂಬಸ್ಥರ ಮಾಹಿತಿ ಪ್ರಕಾರ, ಮೃತರ ಪತ್ನಿ ಸೀಮಾಪುರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದರು. ಈ ವೇಳೆ ಮನೆಯಲ್ಲಿ ಮೃತ ವ್ಯಕ್ತಿ ಒಬ್ಬರೇ ಇದ್ದಾಗ ದುಷ್ಕರ್ಮಿಗಳು ಕತ್ತು ಸೀಳಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಮೃತರ ಮಗಳು ಶಿವಾನಿ ಮಾತನಾಡಿ, “ನಾನು ನೆಲಮಹಡಿಯಲ್ಲಿದ್ದೆ. ಅಕ್ಕಪಕ್ಕದ ಮನೆಯವರು ನನ್ನನ್ನು ಎಬ್ಬಿಸಿದರು. ಬಳಿಕ ಮೇಲಕ್ಕೆ ಓಡಿ ಹೋದಾಗ ನನ್ನ ತಂದೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕುತ್ತಿಗೆಯಿಂದ ರಕ್ತ ಹರಿಯುತ್ತಿತ್ತು. ನೋಡಲು ಸಹ ಆಗಲಿಲ್ಲ” ಎಂದು ಭಾವುಕರಾದರು.
ನೆರೆಮನೆಯವರ ಪಾತ್ರವಿದೆ ಎಂದು ಕುಟುಂಬಸ್ಥರ ಆರೋಪ
ಮೃತರ ಪತ್ನಿ ಉಷಾ ಅವರ ಪ್ರಕಾರ, ಅವರು ಕಾರ್ಯಕ್ರಮಕ್ಕೆ ಹೊರಡುವ ಮೊದಲು ತಮ್ಮ ಪತಿಯನ್ನು ಶಂಕಿತ ವ್ಯಕ್ತಿಯೊಂದಿಗೆ ಕೊನೆಯ ಬಾರಿ ನೋಡಿದ್ದರು ಎಂದು ತಿಳಿಸಿದ್ದಾರೆ. ಹೀಗಾಗಿ ಈ ಕೊಲೆಯ ಹಿಂದೆ ನೆರೆಮನೆಯವರ ಕೈವಾಡವಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
“ಹೊರಡುವ ಮುನ್ನ ನಾನು ಗಂಡನ ಬಳಿ ಹಣ ತೆಗೆದುಕೊಳ್ಳುತ್ತಿದ್ದೆ. ಆ ವೇಳೆ ಆ ವ್ಯಕ್ತಿ ಅಲ್ಲಿಯೇ ಕುಳಿತಿದ್ದ. ನೀರು ಕೇಳಿದ್ದ. ನಾನು ಹೊರಟ ಬಳಿಕ ಈ ದುಷ್ಕೃತ್ಯ ನಡೆದಿದೆ ಎಂದು ಊಹಿಸಲೂ ಆಗಿರಲಿಲ್ಲ. ಆ ವ್ಯಕ್ತಿಗೆ ಚಿನ್ನದ ಸರ, ಉಂಗುರ ಹಾಗೂ ಹಣದ ಮೇಲೆ ಕಣ್ಣು ಇತ್ತು. ಅದಕ್ಕಾಗಿ ಕೊಲೆ ಮಾಡಿರುವ ಸಾಧ್ಯತೆ ಇದೆ” ಎಂದು ಪತ್ನಿ ಉಷಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಸಂಬಂಧ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ