ಮಂಗಳೂರು: ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ತುಂಬು ಗರ್ಭಿಣಿಯೊಬ್ಬರು ರೈಲಿನಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ. ರೋಡ್ ನಲ್ಲಿ ಭಾನುವಾರ ರಾತ್ರಿ ಘಟನೆ ನಡೆದಿದೆ. ಮೈಸೂರು ನಿವಾಸಿ ಪೊನ್ನಮ್ಮ ಮಗುವಿಗೆ ಜನ್ಮ ನೀಡಿದ ಮಹಿಳೆ. ಮಂಗಳೂರಿನಲ್ಲಿ ರೈಲು ಹತ್ತಿದ ಪೊನ್ನಮ್ಮ ಅವರಿಗೆ ಸ್ವಲ್ಪ ಹೊತ್ತಿನಲ್ಲಿಯೇ ಹೆರಿಗೆ ನೋವು ಕಾಣಿಸಿಕೊಂಡಿದೆ. ಸಹ ಪ್ರಯಾಣಿಕರು ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ರೈಲ್ವೆ ಇಲಾಖೆ ಬಿ.ಸಿ. ರೋಡ್ ನಿಲ್ದಾಣದಲ್ಲಿ ರೈಲನ್ನು ನಿಲ್ಲಿಸಿದೆ. ಸ್ಥಳೀಯ ಸೋಮಯಾಜಿ ಆಸ್ಪತ್ರೆಯ ವೈದ್ಯರ ತಂಡವನ್ನು ಕರೆಸಿಕೊಂಡು ಬೋಗಿಯೊಳಗೆ ಹೆರಿಗೆಗೆ ವ್ಯವಸ್ಥೆ ಮಾಡಲಾಗಿದೆ. ಪೊನ್ನಮ್ಮ ಬಿ.ಸಿ. ರೋಡ್ ರೈಲು ನಿಲ್ದಾಣದಲ್ಲಿ ಬೋಗಿಯೊಳಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಹೆರಿಗೆ ಬಳಿಕ ತಾಯಿ, ಮಗು ಸುರಕ್ಷಿತವಾಗಿದ್ದು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.