ನವದೆಹಲಿ: ಆಮ್ ಆದ್ಮಿ ಪಕ್ಷಕ್ಕೆ (AAP) ದೊಡ್ಡ ರಾಜಕೀಯ ಆಘಾತ ಉಂಟಾಗಿದೆ. ರಾಘವ್ ಚಡ್ಡಾ (Raghav Chadha) ಸೇರಿದಂತೆ ಒಟ್ಟು 7 ರಾಜ್ಯಸಭಾ ಸಂಸದರು ಬಿಜೆಪಿ (BJP) ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ರಾಘವ್ ಚಡ್ಡಾ, ಅಶೋಕ್ ಮಿತ್ತಲ್, ಸಂದೀಪ್ ಪಾಠಕ್ ಸೇರಿದಂತೆ 7 ರಾಜ್ಯಸಭಾ ಸದಸ್ಯರು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಕುರಿತು ರಾಘವ್ ಚಡ್ಡಾ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ರಾಜ್ಯಸಭೆಯ 2/3 ಸದಸ್ಯರ ಬೆಂಬಲ ತಮ್ಮೊಂದಿಗೆ ಇರುವುದಾಗಿ ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿರುವ ಎಎಪಿ ಸದಸ್ಯರ ಪೈಕಿ ನಾವು 2/3 ಸದಸ್ಯರು ಸಂವಿಧಾನಾತ್ಮಕ ವಿಧಿಗಳನ್ನು ಅನುಸರಿಸಿ ಬಿಜೆಪಿಯೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ. ನಾನು ನನ್ನ ಯೌವನದ 15 ವರ್ಷಗಳನ್ನು, ರಕ್ತ-ಬೆವರನ್ನು ಹೂಡಿ ಕಟ್ಟಿದ ಎಎಪಿ ತನ್ನ ಮೂಲ ಸಿದ್ಧಾಂತಗಳು, ಮೌಲ್ಯಗಳು ಮತ್ತು ನೈತಿಕ ದಿಕ್ಕಿನಿಂದ ದೂರವಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈಗ ಈ ಪಕ್ಷ ರಾಷ್ಟ್ರ ಹಿತಾಸಕ್ತಿಗಿಂತ ವೈಯಕ್ತಿಕ ಲಾಭಕ್ಕೆ ಹೆಚ್ಚು ಮಹತ್ವ ನೀಡುತ್ತಿದೆ ಎಂದು ಚಡ್ಡಾ ಹೇಳಿದ್ದಾರೆ.
ಕಳೆದ ಹಲವು ವರ್ಷಗಳಿಂದ ನಾನು ತಪ್ಪು ದಿಕ್ಕಿನ ಪಕ್ಷದಲ್ಲಿ ಸರಿಯಾದ ಕೆಲಸ ಮಾಡುವ ವ್ಯಕ್ತಿಯಾಗಿ ಉಳಿದಿದ್ದೇನೆ ಎಂಬ ಭಾವನೆ ಉಂಟಾಗಿದೆ. ಆದ್ದರಿಂದ ಇಂದು ನಾನು ಎಎಪಿಯಿಂದ ದೂರ ಸರಿದು ಜನರ ಹತ್ತಿರ ಹೋಗುತ್ತಿದ್ದೇನೆ ಎಂದು ಅವರು ಘೋಷಿಸಿದ್ದಾರೆ.