ಕೊಪ್ಪಳ: ಬಿಜೆಪಿ ನಾಯಕರ ಮೇಲೆ ಒತ್ತಡ ಹೇರುವ ಉದ್ದೇಶದಿಂದಲೇ ಈ ಕಾರ್ಯಕ್ರಮ ಆಯೋಜಿಸಲಾಗಿದೆ, ಇದು ಅಭಿಮಾನೋತ್ಸವವಲ್ಲ, ನೇರವಾಗಿ ಬ್ಲ್ಯಾಕ್‌ಮೇಲೋತ್ಸವ ಎಂದು ಬಿಜೆಪಿ ಉಚ್ಚಾಟಿತ ಶಾಸಕ Basanagouda Patil Yatnal ವಾಗ್ದಾಳಿ ನಡೆಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, B. S. Yediyurappa ಅವರ ಅಭಿಮಾನೋತ್ಸವ ನಡೆಸಲು ಅವರು ಮಾಡಿದ ಸಾಧನೆ ಏನು ಎಂದು ಪ್ರಶ್ನಿಸಿದರು. 50 ವರ್ಷಗಳಲ್ಲಿ ಜನಪರ ಕೆಲಸಗಳಿಗಿಂತ ಭ್ರಷ್ಟಾಚಾರದ ಆರೋಪಗಳೇ ಹೆಚ್ಚು ಎಂದು ಟೀಕಿಸಿದರು. ಭ್ರಷ್ಟಾಚಾರ ಪ್ರಕರಣಗಳಿಂದಲೇ ಜೈಲು ಹೋಗಬೇಕಾದ ಪರಿಸ್ಥಿತಿ ಬಂದಿತ್ತು, ಆದರೆ ರಾಜಕೀಯ ಹೊಂದಾಣಿಕೆಯಿಂದ ಹೊರಗಿದ್ದಾರೆ ಎಂದು ಆರೋಪಿಸಿದರು. ಬಿಜೆಪಿ ನಾಯಕರನ್ನು ಬ್ಲ್ಯಾಕ್‌ಮೇಲ್ ಮಾಡಲು ಈ ಕಾರ್ಯಕ್ರಮ ಬಳಸಲಾಗುತ್ತಿದೆ, ಇದು ಸಂಭ್ರಮೋತ್ಸವವಲ್ಲ, ಬ್ಲ್ಯಾಕ್‌ಮೇಲೋತ್ಸವ ಎಂದು ವ್ಯಂಗ್ಯವಾಡಿದರು.
ಮುಂದಿನ ನವೆಂಬರ್‌ಗೆ ವಿಜಯೇಂದ್ರ ಅವರ ಅವಧಿ ಮುಗಿಯಲಿದ್ದು, ಅದನ್ನು ವಿಸ್ತರಿಸಿಕೊಳ್ಳಲು ಜನಬೆಂಬಲ ಇದೆ ಎನ್ನುವ ಸಂದೇಶ ನೀಡಲು ಈ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಯತ್ನಾಳ್ ಆರೋಪಿಸಿದರು. ಯಡಿಯೂರಪ್ಪ ಲಿಂಗಾಯತ ಸಮುದಾಯಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಪ್ರಶ್ನಿಸಿದ ಅವರು, ಲಿಂಗಾಯತರನ್ನು ಒಬಿಸಿ ಪಟ್ಟಿಗೆ ಸೇರಿಸುವ ಮಾತು ಹೇಳಿ ನಂತರ ಮಠಗಳಿಗೆ ಅನುದಾನ ನೀಡಿದರೆ ಸಾಕಾಗುವುದಿಲ್ಲ ಎಂದರು. ಮುಖ್ಯಮಂತ್ರಿ ಸ್ಥಾನದಲ್ಲಿರುವವರು ಒಂದೇ ಜಾತಿಗೆ ಸೀಮಿತವಾಗದೆ ಎಲ್ಲಾ ಸಮುದಾಯದ ಬಡವರ ಪರ ಕೆಲಸ ಮಾಡಬೇಕು ಎಂದು ಹೇಳಿದರು.
ಲಿಂಗಾಯತ ಮಠಗಳಿಗೆ ಕೆಲ ಕೋಟಿ ರೂ. ಅನುದಾನ ನೀಡಿದರೆ ಅದನ್ನೇ ದೊಡ್ಡ ಸಾಧನೆ ಎಂದು ಹೇಳಿಕೊಳ್ಳಲಾಗುತ್ತಿದೆ. ಆದರೆ ಯಡಿಯೂರಪ್ಪ ಯಾವುದೇ ಮಹತ್ವದ ಅಭಿವೃದ್ಧಿ ಕಾರ್ಯ ಮಾಡಿಲ್ಲ ಎಂದು ಟೀಕಿಸಿದರು. ನಾಳೆ ನಡೆಯುವ ಕಾರ್ಯಕ್ರಮ ಮಕ್ಕಳ ರಾಜಕೀಯ ಭವಿಷ್ಯಕ್ಕಾಗಿ ನಡೆಸಲಾಗುತ್ತಿದೆ. ಇದು ದೃತರಾಷ್ಟ್ರನ ಎದುರು ದುರ್ಯೋಧನನ ಪಟ್ಟಾಭಿಷೇಕದಂತಿದೆ ಎಂದು ಕಿಡಿಕಾರಿದರು.
ಇಂತಹ ಅನೇಕ ಭ್ರಷ್ಟಾಚಾರ ಹಾಗೂ ವಿವಾದಗಳಲ್ಲಿ ಹೆಸರು ಕೇಳಿಬಂದ ವ್ಯಕ್ತಿಗಳು ಸಮಾಜಕ್ಕೆ ಆದರ್ಶರಾಗಲು ಸಾಧ್ಯವಿಲ್ಲ. ಇಂದಿನ ರಾಜಕೀಯ ಸಂಪೂರ್ಣ ಭ್ರಷ್ಟಾಚಾರದಿಂದ ಕಲುಷಿತವಾಗಿದೆ. ಲೂಟಿ ಮಾಡುವುದು ರಾಜಕಾರಣಿಗಳ ಕೆಲಸವಾಗಿಬಿಟ್ಟಿದೆ ಎಂದು ಯತ್ನಾಳ್ ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೆ 50 ಸಾವಿರ ಕುರ್ಚಿ ಹಾಕಿ 10 ಲಕ್ಷ ಜನ ಬರುತ್ತಾರೆ ಎನ್ನುವುದು ಅಸಾಧ್ಯ. ಅಷ್ಟು ಜನರನ್ನು ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ತಲೆಯ ಮೇಲೆ ಕೂರಿಸುತ್ತಾರೆಯೇ ಎಂದು ವ್ಯಂಗ್ಯವಾಡಿದರು. ಬಿಜೆಪಿಯೇ ಯಡಿಯೂರಪ್ಪ, ಯಡಿಯೂರಪ್ಪನೇ ಬಿಜೆಪಿ ಎಂಬ ಸ್ಥಿತಿ ನಿರ್ಮಾಣವಾಗಿದೆ. ಪರ್ಯಾಯ ನಾಯಕರನ್ನು ಬೆಳೆಯಲು ಅವಕಾಶ ನೀಡಲಾಗುತ್ತಿಲ್ಲ ಎಂದು ಆರೋಪಿಸಿದರು.
ತಮ್ಮನ್ನು ಯಾರೂ ಮೂಲೆಗುಂಪು ಮಾಡಲು ಸಾಧ್ಯವಿಲ್ಲ. ಈಗ ಜನರ ಬೆಂಬಲ ನನ್ನೊಂದಿಗಿದೆ. Jagadish Shettar, D. V. Sadananda Gowda ಹಾಗೂ Basavaraj Bommai ಅವರನ್ನು ಪಕ್ಷದಲ್ಲಿ ಕಡೆಗಣಿಸಲಾಗಿದೆ ಎಂದು ಹೇಳಿದರು. ನನ್ನ ಪ್ರಭಾವ ಸಿಎಂ ಮಟ್ಟಕ್ಕಿಂತ ಹೆಚ್ಚಿದೆ. ವಿಜಯಪುರದಲ್ಲಿ ಸಿಎಂ ಕಾರ್ಯಕ್ರಮಕ್ಕೆ ಬಂದಾಗ ಜನರು ನನಗೆ ಹೆಚ್ಚು ಚಪ್ಪಾಳೆ ಹೊಡೆದರು. ಅದನ್ನು Siddaramaiah ಕೂಡ ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರೊಂದಿಗೆ ನನಗೆ ಯಾವುದೇ ಹೊಂದಾಣಿಕೆ ಇಲ್ಲ. ಅವರ ಮನೆಗೆ ಹೋಗುವುದಿಲ್ಲ. ಯಡಿಯೂರಪ್ಪ ಅವರಂತೆ ರಾತ್ರಿ ವೇಳೆ ಹೋಗಿ ಪತ್ರ ಕೊಡುವ ರಾಜಕೀಯ ನಾನು ಮಾಡುವುದಿಲ್ಲ ಎಂದು ಹೇಳಿದರು. ಇದೇ ವೇಳೆ D. K. Shivakumar ಅವರ ಮನೆಗೂ ನಾನು ಎಂದಿಗೂ ಹೋಗಿಲ್ಲ ಎಂದು ಸ್ಪಷ್ಟಪಡಿಸಿದರು.
ಹೊಸ ಪಕ್ಷ ಸ್ಥಾಪನೆ ಕುರಿತು ಮಾತನಾಡಿದ ಯತ್ನಾಳ್, ಮುಂದಿನ ಆರು ತಿಂಗಳು ರಾಜ್ಯ ಪ್ರವಾಸ ಕೈಗೊಂಡು ಜನರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.