ಬೆಂಗಳೂರು ಹೊರವಲಯದ ಆನೇಕಲ್‌ನಲ್ಲಿ ಸ್ಕ್ಯಾನಿಂಗ್ ವೇಳೆ ಮಹಿಳೆ ಲೈಂಗಿಕ ಕಿರುಕುಳಕ್ಕೆ ಒಳಗಾದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಪ್ಲಾಸ್ಮಾ ಮೆಡಿನೊಸ್ಟಿಕ್ಸ್ ಲ್ಯಾಬ್‌ನಲ್ಲಿ ಕೆಲಸ ಮಾಡುತ್ತಿದ್ದ ರೇಡಿಯಾಲಜಿಸ್ಟ್ ಜಯಕುಮಾರ್ ವಿರುದ್ಧ ಆನೇಕಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿಧಾತ ಶಾಲೆ ಬಳಿ ಇರುವ ಸ್ಕ್ಯಾನಿಂಗ್ ಸೆಂಟರ್‌ಗೆ ಮಹಿಳೆ ವೈದ್ಯರ ಸಲಹೆಯ ಮೇರೆಗೆ ಪರೀಕ್ಷೆಗಾಗಿ ತೆರಳಿದ್ದಳು. ಸ್ಕ್ಯಾನಿಂಗ್ ನಡೆಯುವ ಸಮಯದಲ್ಲಿ ರೇಡಿಯಾಲಜಿಸ್ಟ್ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆಕೆ ಆರೋಪಿಸಿದ್ದಾರೆ.
ಆನೇಕಲ್‌ನ ನಿವಾಸಿಯಾದ ಆ ಮಹಿಳೆ, ನವೆಂಬರ್ 7 ರಂದು ಅನಾರೋಗ್ಯದಿಂದ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದು, ಅಲ್ಲಿ ವೈದ್ಯರು ಸ್ಕ್ಯಾನ್ ಮಾಡಿಸಲು ಸಲಹೆ ನೀಡಿದ್ದರು. ನಂತರ, ಪತಿಯೊಂದಿಗೆ ಪ್ಲಾಸ್ಮಾ ಮೆಡಿನೊಸ್ಟಿಕ್ಸ್‌ಗೆ ಭೇಟಿ ನೀಡಿದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಸ್ಕ್ಯಾನಿಂಗ್ ವೇಳೆ ಆರೋಪಿಯು ಮೊದಲಿಗೆ ಆಕೆಗೆ ಎರಡು ಗ್ಲಾಸ್ ನೀರು ಕುಡಿಯಲು ಹೇಳಿದ ನಂತರ, ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ದೂರು ನೀಡಲಾಗಿದೆ. ಮಹಿಳೆ ಇದನ್ನು ಪ್ರಶ್ನಿಸಿದಾಗ, ರೇಡಿಯಾಲಜಿಸ್ಟ್ ಕೂಗಾಡಿ, “ನಂಬಿಕೆ ಇಲ್ಲದಿದ್ದರೆ ಹೊರ ಹೋಗಿ” ಎಂದು ಬೆದರಿಕೆಯೊಡ್ಡಿದ್ದಾನೆ ಎನ್ನಲಾಗಿದೆ.
ಈ ಘಟನೆ ಬಳಿಕ ಮಹಿಳೆ ಸೋಮವಾರ ಸಂಜೆ ಆನೇಕಲ್ ಪೊಲೀಸ್ ಠಾಣೆಗೆ ತೆರಳಿ ಅಧಿಕೃತ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಪ್ರಾರಂಭಿಸಿದ್ದಾರೆ.