ಮಡಿಕೇರಿ: ಕೊಡಗು ಜಿಲ್ಲೆಯ ಕೇರಳ ಗಡಿಭಾಗವಾದ ಕುಟ್ಟ ವ್ಯಾಪ್ತಿಯಲ್ಲಿ ಅಮೆರಿಕ ಮೂಲದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ. ವಾಷಿಂಗ್ಟನ್ ಮೂಲದ ಮಹಿಳೆ ಮೇಲೆ ಜಾರ್ಖಂಡ್ ಮೂಲದ ವೃಜೇಶ್ ಕುಮಾರ್ ದೌರ್ಜನ್ಯ ಎಸಗಿದ ಆರೋಪವಿದ್ದು, ಪ್ರಕರಣಕ್ಕೆ ಸಂಬಂಧಿಸಿ ಹೋಂಸ್ಟೇ ಮಾಲೀಕ ವಿಶಾಲ್‌ನನ್ನೂ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಏನಿದು ಪ್ರಕರಣ?
ಪ್ರವಾಸಕ್ಕಾಗಿ ಬಂದಿದ್ದ ವಿದೇಶಿ ಮಹಿಳೆ ಕುಟ್ಟ ಗ್ರಾಮದ ದೇವಿ ವಿಲ್ಲಾ ಹೋಂಸ್ಟೇನಲ್ಲಿ ವಾಸ್ತವ್ಯ ಹೂಡಿದ್ದರು. ಈ ವೇಳೆ ಅಲ್ಲಿದ್ದ ಜಾರ್ಖಂಡ್ ಮೂಲದ ವೃಜೇಶ್ ಕುಮಾರ್ ಸಿಹಿ ಪಾನೀಯದಲ್ಲಿ ನಿಶ್ಚೇತನಗೊಳಿಸುವ ಔಷಧಿ ಬೆರೆಸಿ ಮಹಿಳೆಗೆ ನೀಡಿದ್ದಾನೆ ಎನ್ನಲಾಗಿದೆ. ಪಾನೀಯ ಸೇವಿಸಿದ ಬಳಿಕ ಮಹಿಳೆ ಪ್ರಜ್ಞೆ ತಪ್ಪಿದಾಗ ಆಕೆಯ ಮೇಲೆ ದೌರ್ಜನ್ಯ ಎಸಗಿದರೆಂದು ಸಂತ್ರಸ್ತೆ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಕರಣ ಮುಚ್ಚಿಹಾಕಲು ಯತ್ನ
ಘಟನೆಯ ಮಾಹಿತಿ ತಿಳಿದ ಬಳಿಕ ಹೋಂಸ್ಟೇ ಮಾಲೀಕ ವಿಶಾಲ್ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಮೂರು ದಿನಗಳ ಕಾಲ ಸಂತ್ರಸ್ತೆಯನ್ನು ಯಾರನ್ನೂ ಸಂಪರ್ಕಿಸದಂತೆ ತಡೆಯಲಾಗಿದ್ದು, ಹೋಂಸ್ಟೇ ವೈಫೈ ಸಂಪರ್ಕವನ್ನೂ ಕಡಿತಗೊಳಿಸಲಾಗಿತ್ತು ಎಂದು ದೂರಿನಲ್ಲಿ ಹೇಳಲಾಗಿದೆ. ಬಳಿಕ ಮೈಸೂರಿಗೆ ತೆರಳುವುದಾಗಿ ಹೇಳಿ ಹೊರಟ ಮಹಿಳೆ ಅಲ್ಲಿ ಅಮೆರಿಕ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಇ-ಮೇಲ್ ಮೂಲಕ ಮೈಸೂರಿನ ಅಧಿಕಾರಿಗಳಿಗೆ ಸೂಚನೆ ನೀಡಿದ ರಾಯಭಾರ ಕಚೇರಿ, ಪ್ರಕರಣ ದಾಖಲಿಸಲು ತಿಳಿಸಿದೆ. ಅದರಂತೆ ಮೈಸೂರಿನ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಕೊಡಗಿಗೆ ವಿದೇಶಾಂಗ ಇಲಾಖೆಯ ಅಧಿಕಾರಿಗಳ ಭೇಟಿ
ಘಟನೆ ಬಹಿರಂಗವಾದ ಬಳಿಕ ಡೆಲ್ಲಿ ಮತ್ತು ಚೆನ್ನೈಯ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಮಂಗಳವಾರ ಕೊಡಗಿಗೆ ಭೇಟಿ ನೀಡಿದ್ದಾರೆ. ಆದರೆ ಅಧಿಕಾರಿಗಳಿಗೆ ಸ್ಪಷ್ಟ ಮಾಹಿತಿ ನೀಡಲು ಕೊಡಗು ಎಸ್ಪಿ ಹಿಂದೆ ಸರಿದಿದ್ದಾರೆ. ಸದ್ಯ ಆರೋಪಿಗಳಾದ ವೃಜೇಶ್ ಕುಮಾರ್ ಮತ್ತು ಹೋಂಸ್ಟೇ ಮಾಲೀಕ ವಿಶಾಲ್ ಬಂಧನದಲ್ಲಿದ್ದು, ನ್ಯಾಯಾಲಯ ಮೇ 3ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದ್ದು, ಹೆಚ್ಚಿನ ಮಾಹಿತಿ ಇದೀಗ ಬಹಿರಂಗಪಡಿಸಲಾಗುವುದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.