ಬಳ್ಳಾರಿ:28:. ನಗರದ ಬಳ್ಳಾರಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್‌ಮೆಂಟ್ (ಬಿಐಟಿಎಂ) ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಅನಿಲ್‌ಕುಮಾರ್ ಹೆಚ್. ಎಂ. ಅವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ (ವಿಟಿಯು) ಪ್ರತಿಷ್ಠಿತ ಡಾಕ್ಟರೇಟ್ (ಪಿಎಚ್.ಡಿ) ಪದವಿ ಲಭಿಸಿದೆ.
ಬೆಳಗಾವಿಯ ವಿಟಿಯು ಆವರಣದಲ್ಲಿ ಶನಿವಾರ (ಸೆಪ್ಟೆಂಬರ್ 26) ಜರುಗಿದ ಘಟಿಕೋತ್ಸವ ಸಮಾರಂಭದಲ್ಲಿ, ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರು ಸೇರಿದಂತೆ ಹಲವು ಗಣ್ಯರ ಉಪಸ್ಥಿತಿಯಲ್ಲಿ ಅನಿಲ್‌ಕುಮಾರ್ ಅವರು ಅಧಿಕೃತವಾಗಿ ಪಿಎಚ್.ಡಿ ಪದವಿಯನ್ನು ಸ್ವೀಕರಿಸಿದರು.
ಬಳ್ಳಾರಿಯ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನ (RYMEC) ಸಂಶೋಧನಾ ಕೇಂದ್ರದ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮಾರ್ಗದರ್ಶಕಿ ಡಾ. ಎಂ. ಎಸ್. ಶೋಭಾ ಅವರ ಮಾರ್ಗದರ್ಶನದಲ್ಲಿ ಅನಿಲ್‌ಕುಮಾರ್ ಅವರು ಸಂಶೋಧನೆ ಪೂರ್ಣಗೊಳಿಸಿದ್ದಾರೆ. ಅವರು ಮಂಡಿಸಿದ “Investigation on Performance Evaluation of Geopolymer Concrete with Multi Fibers and M-Sand for Different Molarities” ಕುರಿತಾದ ಸಂಶೋಧನಾ ಮಹಾಪ್ರಬಂಧಕ್ಕೆ ವಿಟಿಯು ಈ ಪಿಎಚ್.ಡಿ ಪದವಿಯನ್ನು ನೀಡಿದೆ.
ಕಾಲೇಜು ಆಡಳಿತ ಮಂಡಳಿ, ಪ್ರಾಧ್ಯಾಪಕ ವೃಂದ, ವಿದ್ಯಾರ್ಥಿಗಳು ಹಾಗೂ ಹಿತೈಷಿಗಳು ಹಾರ್ದಿಕ ಅಭಿನಂದನೆ ಸಲ್ಲಿಸಿದ್ದಾರೆ.