ನವದೆಹಲಿ, ಅ. 31: ಭಾರತೀಯ ವಾಯುಪಡೆಯ ಅತ್ಯುನ್ನತ ಹುದ್ದೆಯ ಜವಾಬ್ದಾರಿಯನ್ನು ಏರ್ ಚೀಫ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಶನಿವಾರ ವಹಿಸಿಕೊಂಡಿದ್ದಾರೆ. ಇದರೊಂದಿಗೆ ಅವರು ದೇಶದ ವಾಯುಪಡೆಯ 29ನೇ ಮುಖ್ಯಸ್ಥರಾಗಿದ್ದಾರೆ.
ಸುಮಾರು 43 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಅವರ ಸ್ಥಾನಕ್ಕೆ ದೀಕ್ಷಿತ್ ನೇಮಕಗೊಂಡಿದ್ದಾರೆ. ಕೇಂದ್ರ ಸರ್ಕಾರದ ಆದೇಶದಂತೆ 2028ರ ಡಿಸೆಂಬರ್ವರೆಗೆ ಅವರು ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.
1986ರ ಡಿಸೆಂಬರ್ನಲ್ಲಿ ಯುದ್ಧವಿಮಾನ ಪೈಲಟ್ ಆಗಿ ವಾಯುಪಡೆಗೆ ಪ್ರವೇಶಿಸಿದ ದೀಕ್ಷಿತ್, ನಾಲ್ಕು ದಶಕಗಳ ಸೇನಾ ವೃತ್ತಿಜೀವನದಲ್ಲಿ ವಿವಿಧ ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. 3,500 ಗಂಟೆಗಳಿಗೂ ಹೆಚ್ಚು ವಿಮಾನ ಹಾರಾಟದ ಅನುಭವ ಹೊಂದಿರುವ ಅವರು, ಮಿರಾಜ್–2000, ಜಾಗ್ವಾರ್, ಹಾಕ್, ಮಿಗ್, ಐಎಲ್–78 ಹಾಗೂ ಸ್ವದೇಶಿ ತೇಜಸ್ ಸೇರಿದಂತೆ ಹಲವು ಬಗೆಯ ವಿಮಾನಗಳನ್ನು ಹಾರಿಸಿದ್ದಾರೆ.
ಕಾರ್ಗಿಲ್ ಸಂಘರ್ಷದ ಸಂದರ್ಭದಲ್ಲಿ ನಡೆದ ಆಪರೇಷನ್ ಸಫೇದ್ ಸಾಗರ್, ಆಪರೇಷನ್ ರಕ್ಷಕ್ ಮತ್ತು ಇತ್ತೀಚಿನ ಆಪರೇಷನ್ ಸಿಂಧೂರ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡ ಅನುಭವವೂ ಅವರಿಗಿದೆ.
ಆಧುನಿಕ ಯುದ್ಧವಿಮಾನಗಳ ಸಾಮರ್ಥ್ಯ ವೃದ್ಧಿ, ವಾಯು ರಕ್ಷಣಾ ವ್ಯವಸ್ಥೆಯ ಸುಧಾರಣೆ ಹಾಗೂ ಸ್ವದೇಶಿ ರಕ್ಷಣಾ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡುವ ಮಹತ್ವದ ಹೊಣೆಗಾರಿಕೆಗಳು ನೂತನ ವಾಯುಪಡೆ ಮುಖ್ಯಸ್ಥರ ಮುಂದಿವೆ.