ಬೆಂಗಳೂರು, ಅ. 31: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಸಾರ್ಟಿಸಿ) ಒಟ್ಟು 2,600 ಹೆಚ್ಚುವರಿ ಬಸ್ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ.
ನವೆಂಬರ್ 8ರಂದು ನರಕ ಚತುರ್ದಶಿ ಹಾಗೂ ನವೆಂಬರ್ 10ರಂದು ಬಲಿಪಾಡ್ಯಮಿ ಇರುವುದರಿಂದ ನವೆಂಬರ್ 6ರಿಂದ 8ರವರೆಗೆ ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಗೆ ವಿಶೇಷ ಬಸ್ಗಳು ಸಂಚರಿಸಲಿವೆ. ಹಬ್ಬ ಮುಗಿಸಿ ಮರಳುವ ಪ್ರಯಾಣಿಕರಿಗಾಗಿ ನವೆಂಬರ್ 10 ಮತ್ತು 11ರಂದು ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಹೆಚ್ಚುವರಿ ಬಸ್ಗಳನ್ನು ಓಡಿಸಲಾಗುವುದು ಎಂದು ನಿಗಮ ತಿಳಿಸಿದೆ.
ಬೆಂಗಳೂರಿನ ಕೆಂಪೇಗೌಡ, ಮೈಸೂರು ರಸ್ತೆ ಹಾಗೂ ಶಾಂತಿನಗರ ಬಸ್ ನಿಲ್ದಾಣಗಳಿಂದ ವಿಶೇಷ ಬಸ್ಗಳು ಕಾರ್ಯಾಚರಿಸಲಿವೆ. ಮುಂಗಡ ಕಾಯ್ದಿರಿಸಿದ ಕೆಲವು ಬಸ್ಗಳು ವಿಜಯನಗರ, ಯಶವಂತಪುರ, ಜಯನಗರ, ಮಲ್ಲೇಶ್ವರ, ಬಸವೇಶ್ವರ ನಗರ, ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ ಹಾಗೂ ಟಿನ್ ಫ್ಯಾಕ್ಟರಿ ಸೇರಿದಂತೆ ವಿವಿಧ ನಿಲ್ದಾಣಗಳಿಂದ ಹೊರಡಲಿವೆ.
ಕೆಂಪೇಗೌಡ ಬಸ್ ನಿಲ್ದಾಣದಿಂದ ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ವಿಜಯಪುರ, ಬಾಗಲಕೋಟೆ ಭಾಗದ ಪ್ರಯಾಣಿಕರಿಗೆ ಅನುಕೂಲವಾಗುವ ಮಾರ್ಗಗಳು ಸೇರಿದಂತೆ ಮಂಗಳೂರು, ಉಡುಪಿ, ಶಿವಮೊಗ್ಗ, ದಾವಣಗೆರೆ, ಕಾರವಾರ, ಕಲಬುರಗಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಬೀದರ್ ಹಾಗೂ ಇತರ ಪ್ರಮುಖ ನಗರಗಳಿಗೆ ಹೆಚ್ಚುವರಿ ಸಾರಿಗೆ ಸೌಲಭ್ಯ ಕಲ್ಪಿಸಲಾಗುವುದು.
ಮೈಸೂರು, ಮಡಿಕೇರಿ, ಕುಶಾಲನಗರ, ವಿರಾಜಪೇಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಮೈಸೂರು ರಸ್ತೆ ನಿಲ್ದಾಣದಿಂದ ಬಸ್ಗಳು ಹೊರಡಲಿವೆ. ಚೆನ್ನೈ, ಮಧುರೈ, ಕೊಯಮತ್ತೂರು, ತ್ರಿಶೂರ್, ಎರ್ನಾಕುಲಂ ಸೇರಿದಂತೆ ತಮಿಳುನಾಡು ಮತ್ತು ಕೇರಳದ ಪ್ರಮುಖ ನಗರಗಳಿಗೆ ಶಾಂತಿನಗರದಿಂದ ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದೆ.
ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಪ್ರಯಾಣಿಕರು ಒಟ್ಟಿಗೆ ಮುಂಗಡ ಟಿಕೆಟ್ ಕಾಯ್ದಿರಿಸಿದರೆ ಪ್ರಯಾಣ ದರದಲ್ಲಿ ಶೇ.5ರಷ್ಟು ರಿಯಾಯಿತಿ ದೊರೆಯಲಿದೆ. ಹೋಗುವ ಮತ್ತು ಹಿಂದಿರುಗುವ ಪ್ರಯಾಣದ ಟಿಕೆಟ್ಗಳನ್ನು ಒಟ್ಟಿಗೆ ಕಾಯ್ದಿರಿಸಿದರೆ ವಾಪಸ್ ಪ್ರಯಾಣದ ದರದಲ್ಲಿ ಶೇ.10ರಷ್ಟು ರಿಯಾಯಿತಿ ನೀಡಲಾಗುವುದು.
ಪ್ರಯಾಣಿಕರು ನಿಗಮದ ಅಧಿಕೃತ ಜಾಲತಾಣ ಅಥವಾ ಮುಂಗಡ ಟಿಕೆಟ್ ಕಾಯ್ದಿರಿಸುವ ಕೇಂದ್ರಗಳ ಮೂಲಕ ಆಸನಗಳನ್ನು ಕಾಯ್ದಿರಿಸಬಹುದು ಎಂದು ಕೆಎಸ್ಸಾರ್ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.