Press ID & Credential Portal
Apply / Verify  ➔
LIVE TV LocalCrimeNationalInternationalPoliticsBusinessFinancialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
Local News

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ಜಿನದತ್ತ ದೇಸಾಯಿ ನಿಧನ

ನ್ಯಾಯಾಂಗ, ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದ ಹಿರಿಯ ಚೇತನ

ಬೆಳಗಾವಿ, ನ. 1: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ನಿವೃತ್ತ ಜಿಲ್ಲಾ ನ್ಯಾಯಾಧೀಶ, ಹಿರಿಯ ಕನ್ನಡ ಸಾಹಿತಿ, ಕವಿ ಹಾಗೂ ಭರತೇಶ್ ಎಜುಕೇಶನ್ ಟ್ರಸ್ಟ್‌ನ ಮಾಜಿ ಅಧ್ಯಕ್ಷ ಡಾ. ಜಿನದತ್ತ ದೇಸಾಯಿ (93) ಅವರು ಭಾನುವಾರ ನಿಧನರಾದರು. ನ್ಯಾಯಾಂಗದಲ್ಲಿ ದಕ್ಷತೆ, ಸಾಹಿತ್ಯದಲ್ಲಿ ಸೃಜನಶೀಲತೆ ಹಾಗೂ ಸಮಾಜಸೇವೆಯಲ್ಲಿ ಉದಾರತೆ ಮೆರೆದಿದ್ದ ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕ ಮತ್ತು ಶೈಕ್ಷಣಿಕ ಕ್ಷೇತ್ರಗಳು ಹಿರಿಯ ಸಾಧಕರೊಬ್ಬರನ್ನು ಕಳೆದುಕೊಂಡಿವೆ.

1933ರ ಏಪ್ರಿಲ್ 3ರಂದು ಧಾರವಾಡ ಜಿಲ್ಲೆಯ ಅಮ್ಮಿನಭಾವಿಯಲ್ಲಿ ಜನಿಸಿದ ಜಿನದತ್ತ ದೇಸಾಯಿ ಅವರು ಧಾರವಾಡದಲ್ಲಿ ಕಾನೂನು ಪದವಿ ಪಡೆದರು. 1962ರಲ್ಲಿ ವಕೀಲರಾಗಿ ವೃತ್ತಿಜೀವನ ಆರಂಭಿಸಿದ ಅವರು, 1966ರಲ್ಲಿ ನ್ಯಾಯಾಂಗ ಸೇವೆಗೆ ಪ್ರವೇಶಿಸಿದರು. 1991ರಲ್ಲಿ ನಿವೃತ್ತರಾಗುವವರೆಗೆ ಬೆಳಗಾವಿಯಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು. ನ್ಯಾಯಾಂಗ ವೃತ್ತಿಯ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುವುದರೊಂದಿಗೆ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು.

ಬಾಲ್ಯದಿಂದಲೇ ಸಾಹಿತ್ಯದತ್ತ ಒಲವು ಬೆಳೆಸಿಕೊಂಡಿದ್ದ ದೇಸಾಯಿ ಅವರು ಕಾಲೇಜು ದಿನಗಳಲ್ಲಿಯೇ ಕವನ ರಚನೆಯಲ್ಲಿ ತೊಡಗಿಸಿಕೊಂಡಿದ್ದರು. ನೀಲಾಂಜನ, ಮತ್ತೆ ಬಂದಿದ್ದೇನೆ, ಮಧುಶಾಲಿನಿ, ಓಲಗಿನ ಗಂಡು, ಹೆಜ್ಜೆ ಸಾಲು ಸೇರಿದಂತೆ ಹಲವು ಕೃತಿಗಳ ಮೂಲಕ ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ್ದರು.

ಅವರ ಸಾಹಿತ್ಯ ಜೀವನದ ವಿಶೇಷವೆಂದರೆ ನ್ಯಾಯಾಂಗ ಸೇವೆಯ ಅವಧಿಯಲ್ಲಿ ಸುಮಾರು 30 ವರ್ಷಗಳ ಕಾಲ ಕಾವ್ಯರಚನೆಯಿಂದ ದೂರ ಉಳಿದಿದ್ದುದು. ವೃತ್ತಿಯ ಜವಾಬ್ದಾರಿಗಳಿಗೆ ಆದ್ಯತೆ ನೀಡಿದ್ದ ಅವರು ನಿವೃತ್ತಿಯ ನಂತರ ಮತ್ತೆ ಬಂದಿದ್ದೇನೆ ಕವನ ಸಂಕಲನದ ಮೂಲಕ ಸಾಹಿತ್ಯ ಲೋಕಕ್ಕೆ ಪುನರಾಗಮಿಸಿದರು. ಆ ಬಳಿಕ ನಿರಂತರ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡು ಕನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡರು.

ಅವರ ಕವಿತೆಗಳು ಒಟ್ಟು 18 ಸಂಕಲನಗಳಲ್ಲಿ ಪ್ರಕಟವಾಗಿವೆ. ಬದುಕಿನ ಅನುಭವ, ಮಾನವೀಯ ಮೌಲ್ಯಗಳು ಹಾಗೂ ಸಾಮಾಜಿಕ ಚಿಂತನೆಗಳನ್ನು ಒಳಗೊಂಡ ಅವರ ಸಾಹಿತ್ಯ ಕೃತಿಗಳು ಸಂಶೋಧಕರ ಗಮನ ಸೆಳೆದಿವೆ. ಹಲವಾರು ವಿದ್ಯಾರ್ಥಿಗಳು ಅವರ ಕೃತಿಗಳ ಕುರಿತು ಸಂಶೋಧನೆ ನಡೆಸಿ ಪಿಎಚ್‌ಡಿ ಪದವಿ ಪಡೆದಿರುವುದು ಅವರ ಸಾಹಿತ್ಯ ಸಾಧನೆಗೆ ಸಾಕ್ಷಿಯಾಗಿದೆ.

ಭರತೇಶ್ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷರಾಗಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೂ ಶ್ರಮಿಸಿದ್ದರು. ಟ್ರಸ್ಟ್‌ನಡಿ ಡಾ. ಎ. ಎನ್. ಉಪಾಧ್ಯೇ ಕನ್ನಡ ಅಧ್ಯಯನ ಕೇಂದ್ರವನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕನ್ನಡ ಮತ್ತು ಇತಿಹಾಸ ವಿಷಯಗಳಲ್ಲಿ ಸ್ನಾತಕೋತ್ತರ ಹಾಗೂ ಸಂಶೋಧನಾ ಅಧ್ಯಯನಕ್ಕೆ ಅವಕಾಶ ಕಲ್ಪಿಸುವ ಮೂಲಕ ಕನ್ನಡ ಭಾಷೆ ಮತ್ತು ಇತಿಹಾಸದ ಅಧ್ಯಯನಕ್ಕೆ ಉತ್ತೇಜನ ನೀಡಿದ್ದರು.

ಅವರ ಸಾಹಿತ್ಯ, ಶಿಕ್ಷಣ ಹಾಗೂ ಸಮಾಜಸೇವೆಯನ್ನು ಗುರುತಿಸಿ 2015ರಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತ್ತು. 2017ರಲ್ಲಿ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 2021ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶ್ರೀ ಕ್ಷೇತ್ರ ಸ್ವಾದಿ ದಿಗಂಬರ ಜೈನ ಮಠದ ಅಕಲಂಕ ಶ್ರೀ ಪ್ರಶಸ್ತಿ ಹಾಗೂ 2022–23ನೇ ಸಾಲಿನ ಶ್ರೀ ಭಗವಾನ್ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಗೌರವಗಳು ಅವರಿಗೆ ಸಂದಿವೆ.

2018ರಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ಅಖಿಲ ಭಾರತೀಯ ಜೈನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಅವರು, ಜೈನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯ ಬೆಳವಣಿಗೆಗೂ ಕೊಡುಗೆ ನೀಡಿದ್ದರು.

ಉದಾರ ದಾನಿಯಾಗಿಯೂ ಗುರುತಿಸಿಕೊಂಡಿದ್ದ ದೇಸಾಯಿ ಅವರು ಶಿಕ್ಷಣ ಸಂಸ್ಥೆಗಳು, ಸಾಹಿತ್ಯಿಕ ಚಟುವಟಿಕೆಗಳು, ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಗಳಿಗೆ ಆರ್ಥಿಕ ನೆರವು ನೀಡುತ್ತಿದ್ದರು. ತಮ್ಮ ಸಂಪನ್ಮೂಲಗಳನ್ನು ಸಮಾಜದ ಒಳಿತಿಗಾಗಿ ವಿನಿಯೋಗಿಸುವ ಮೂಲಕ ಮಾನವೀಯ ಮೌಲ್ಯಗಳಿಗೆ ಪ್ರಾಮುಖ್ಯತೆ ನೀಡಿದ್ದರು.

ನ್ಯಾಯಾಧೀಶರಾಗಿ ಕಾನೂನಿನ ಸೇವೆ, ಕವಿಯಾಗಿ ಕನ್ನಡ ಸಾಹಿತ್ಯದ ಸೇವೆ ಹಾಗೂ ಶಿಕ್ಷಣಪ್ರೇಮಿಯಾಗಿ ಸಮಾಜದ ಸೇವೆ ಸಲ್ಲಿಸಿದ್ದ ಡಾ. ಜಿನದತ್ತ ದೇಸಾಯಿ ಅವರ ಬಹುಮುಖ ವ್ಯಕ್ತಿತ್ವ ಸ್ಮರಣೀಯವಾಗಿದೆ. ಸುಮಾರು ಒಂಬತ್ತು ದಶಕಗಳ ಸುದೀರ್ಘ ಬದುಕಿನಲ್ಲಿ ಅವರು ಬಿಟ್ಟುಹೋದ ಸಾಹಿತ್ಯಿಕ ಮತ್ತು ಶೈಕ್ಷಣಿಕ ಕೊಡುಗೆಗಳು ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿವೆ.

ಮೃತರು ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಸೋಮವಾರ (ನವೆಂಬರ್ 2) ಬೆಳಿಗ್ಗೆ 11 ಗಂಟೆಗೆ ಬೆಳಗಾವಿಯ ಸದಾಶಿವನಗರದ ಸ್ಮಶಾನದಲ್ಲಿ ನಡೆಯಲಿದೆ

Author
KhushiHost News CMS Pro ®
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ಜಿನದತ್ತ ದೇಸಾಯಿ ನಿಧನಸಕ್ಕರೆ ಕನಿಷ್ಠ ಮಾರಾಟ ದರ 50 ರೂ.ಗೆ ಹೆಚ್ಚಿಸಲಿ: ಡಿ.ಕೆ. ಶಿವಕುಮಾರಘಟಪ್ರಭಾದಲ್ಲಿ ರೈತರ ಬಂದ್‌ಗೆ ಬೆಂಬಲ: ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತರೈತರ ಹೋರಾಟ ತೀವ್ರ: ಬೆಳಗಾವಿ, ಧಾರವಾಡ, ವಿಜಯಪುರದಲ್ಲಿ ಪ್ರತಿಭಟನೆದೀಪಾವಳಿ : ಪ್ರಯಾಣಿಕರಿಗಾಗಿ 2,600 ಹೆಚ್ಚುವರಿ ಬಸ್‌ಗಳ ವ್ಯವಸ್ಥೆಜ್ಞಾನೇಶ ಕುಮಾರ ವಿರುದ್ಧ ಜನತಾ ಮಹಾಭಿಯೋಗ: ಖರ್ಗೆ ನಿವಾಸದಲ್ಲಿ ಅಣಕು ಸಂಸತ್ಭಾರತೀಯ ವಾಯುಪಡೆಗೆ ನೂತನ ಸಾರಥಿ ಅಶುತೋಷ ದೀಕ್ಷಿತಶಿವಾನಂದ ನೀಲಣ್ಣನವರಗೆ ಇಡಿ ಬಿಗ್ ಶಾಕ್: ₹427 ಕೋಟಿ ಆಸ್ತಿ ಜಪ್ತಿಪಂಚತಾರಾ ಹೋಟೆಲ್ ಈಜುಕೊಳದಲ್ಲಿ ವಿದ್ಯುತ್ ಆಘಾತ: ಇಬ್ಬರು ವಿದೇಶಿಗರ ಸಾವುಹಾಲಿನ ದರ ಏರಿಕೆ ಅನಿವಾರ್ಯ: ಡಿ.ಕೆ. ಶಿವಕುಮಾರ ಸಮರ್ಥನೆ