ಕಾಗವಾಡ : ಅಥಣಿ ಶುಗರ್ಸ್ ಲಿಮಿಟೆಡ್ ಕಾರ್ಖಾನೆಯ 2026-27ನೇ ಸಾಲಿನ 26ನೇ ಹಂಗಾಮಿನ ಬಾಯ್ಲರ್ ಅಗ್ನಿ ಪ್ರದೀಪನ ಸಮಾರಂಭವು ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು. ಮಾಜಿ ಸಚಿವರು ಹಾಗೂ ಕಾರ್ಖಾನೆಯ ಅಧ್ಯಕ್ಷರಾದ ಶ್ರೀಮಂತ (ತಾತ್ಯಾ) ಪಾಟೀಲ ಅವರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಹಂಗಾಮಿನ ಪ್ರಾರಂಭಕ್ಕೆ ಚಾಲನೆ ನೀಡಿದರು.
ಸಮಾರಂಭದ ಅಂಗವಾಗಿ ಕಾರ್ಖಾನೆಯ ಆವರಣದಲ್ಲಿ ಹೋಮ-ಹವನ ಹಾಗೂ ವಿವಿಧ ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಕಾರ್ಖಾನೆಯ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕರಾದ ಸಂಜಯಕುಮಾರ ಕಾಯಪುರೆ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಅಥಣಿ ಶುಗರ್ಸ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಯುವ ನಾಯಕರಾದ ಶ್ರೀನಿವಾಸ ಶ್ರೀಮಂತ ಪಾಟೀಲ, ಕಾರ್ಖಾನೆಯ ನಿರ್ದೇಶಕರು, ಸ್ಥಳೀಯ ಜನಪ್ರತಿನಿಧಿಗಳು, ರೈತ ಬಾಂಧವರು, ಕಾರ್ಖಾನೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.