ವಿಜಯಪುರ: ಭೀಮಾತೀರದಲ್ಲಿ (Bhimathira) ನಡೆದ 6 ಜನರ ಸಾಮೂಹಿಕ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಪೊಲೀಸರು 12 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಇಂದು ಇಂಡಿ ನ್ಯಾಯಾಲಯಕ್ಕೆ ಚಡಚಣ ಪೊಲೀಸರು ಹಾಜರುಪಡಿಸಲಿದ್ದಾರೆ.
ಮೇ 29ರಂದು ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದ ಜಮೀನಿನಲ್ಲಿ ನಡೆದ ಭೀಕರ ಹತ್ಯಾಕಾಂಡ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಡಬಲ್ ಬ್ಯಾರಲ್ ಗನ್‌ನಿಂದ ಗುಂಡು ಹಾರಿಸಿ, ಮಚ್ಚುಗಳಿಂದ ಕೊಚ್ಚಿ 6 ಮಂದಿಯನ್ನು ಕ್ರೂರವಾಗಿ ಹತ್ಯೆ ಮಾಡಲಾಗಿತ್ತು.
ಈ ಹತ್ಯಾಕಾಂಡದಲ್ಲಿ ಚಡಚಣದ ಪ್ರತಿಷ್ಠಿತ ನಿರಾಳೆ ಕುಟುಂಬದ 5 ಮಂದಿ ಹಾಗೂ ಅವರ ಜೊತೆಗಿದ್ದ ಮತ್ತೋರ್ವ ವ್ಯಕ್ತಿ ಬಲಿಯಾಗಿದ್ದರು. ದುಂಡಪ್ಪ ನಿರಾಳೆ (65), ಶಿವಪುತ್ರ ನಿರಾಳೆ (58), ಚಂದ್ರಕಾಂತ ನಿರಾಳೆ (55), ರಾಹುಲ್ (25), ಸಮರ್ಥ (23) ಮತ್ತು ಶಬ್ಬಿರ್ ಅತ್ತಾರ್ (45) ಮೃತರು.
ಗೋವಿಂದಪುರ ಗ್ರಾಮದ ಅಪ್ಪುಗೌಡ ಪಾಟೀಲ್ ಕುಟುಂಬದವರೇ ಈ ಹತ್ಯೆ ನಡೆಸಿದ್ದಾರೆ ಎಂದು ನಿರಾಳೆ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ಚುರುಕುಗೊಳಿಸಿದ ಪೊಲೀಸರು ಈಗಾಗಲೇ 12 ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.