ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರುಎಣಿಕೆ ಕುರಿತಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಜಯನಗರ ಕ್ಷೇತ್ರದಲ್ಲೂ ಇದೇ ರೀತಿಯ ಘಟನೆ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ. ಶೃಂಗೇರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಿಎನ್ ಜೀವರಾಜ್ ಮುನ್ನಡೆ ಸಾಧಿಸಿರುವ ಹಿನ್ನೆಲೆ ರಾಜಕೀಯ ವಾಗ್ವಾದಗಳು ತೀವ್ರಗೊಂಡಿವೆ. ಭಾರೀ ವಿವಾದ ಮತ್ತು ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾದ ಮರುಎಣಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಚುನಾವಣಾ ಆಯೋಗ ಫಲಿತಾಂಶ ಪ್ರಕಟಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನಮ್ಮ ಅಭ್ಯರ್ಥಿಯೇ ಗೆದ್ದಿದ್ದಾರೆ ಎಂದು ತಿಳಿಸಿದ್ದಾರೆ. ಡಿಎನ್ ಜೀವರಾಜ್ 52 ಮತಗಳ ಅಂತರವನ್ನು ಕಾಯ್ದುಕೊಂಡಿದ್ದಾರೆ ಎನ್ನಲಾಗಿದೆ. ಹೈಕೋರ್ಟ್ ಆದೇಶದಂತೆ ಫಲಿತಾಂಶ ಪ್ರಕಟಿಸಬೇಕಿದ್ದರೂ, ರಾಜ್ಯ ಸರ್ಕಾರದ ಒತ್ತಡದಿಂದ ವಿಳಂಬವಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಇದಕ್ಕೆ ತಿರುಗೇಟು ನೀಡಿದ ಡಿಕೆ ಶಿವಕುಮಾರ್, ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಷಡ್ಯಂತ್ರ ನಡೆಸಿದೆ ಎಂದು ಹೇಳಿದ್ದಾರೆ.
2023ರ ಶೃಂಗೇರಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿಡಿ ರಾಜೇಗೌಡ ಕೇವಲ 201 ಮತಗಳ ಅಂತರದಿಂದ ಗೆದ್ದಿದ್ದರು. ಆಗ 279 ಅಂಚೆ ಮತಗಳನ್ನು ತಿರಸ್ಕರಿಸಲಾಗಿತ್ತು. ಈ ವಿಚಾರವನ್ನು ಪ್ರಶ್ನಿಸಿ ಜೀವರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದರು. 2026ರ ಏಪ್ರಿಲ್‌ನಲ್ಲಿ ಮರುಎಣಿಕೆ ಮಾಡಲು ನ್ಯಾಯಾಲಯ ಆದೇಶಿಸಿತು. ಮೇ 2 ಮತ್ತು 3ರಂದು ಮರುಎಣಿಕೆ ನಡೆದಿದ್ದು, 279 ಅಂಚೆ ಮತಗಳಲ್ಲಿ 255 ಅನ್ನು ಅಮಾನ್ಯ ಎಂದು ಘೋಷಿಸಲಾಗಿದೆ. ಇದರಿಂದ ಬಿಜೆಪಿ ಅಭ್ಯರ್ಥಿಗೆ 52 ಮತಗಳ ಮುನ್ನಡೆ ದೊರೆತಿದೆ ಎಂದು ಹೇಳಲಾಗಿದೆ. ಆದರೆ ಇದನ್ನು ಚುನಾವಣಾ ಆಯೋಗ ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ ಎನ್ನುವುದು ಬಿಜೆಪಿಯ ಆರೋಪ.
ಡಿಕೆ ಶಿವಕುಮಾರ್ ಪ್ರಕಾರ, ಶೃಂಗೇರಿ ಮಾತ್ರವಲ್ಲದೆ ಜಯನಗರ ಕ್ಷೇತ್ರದಲ್ಲಿಯೂ ಇದೇ ರೀತಿಯ ಘಟನೆ ನಡೆದಿದೆ. ಶೃಂಗೇರಿಯಲ್ಲಿ ವ್ಯವಸ್ಥಿತ ಷಡ್ಯಂತ್ರ ನಡೆದಿದ್ದು, ಅಂಚೆ ಮತಗಳನ್ನು ತಿದ್ದುಪಡಿ ಮಾಡಿ ಅಮಾನ್ಯಗೊಳಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಕುರಿತು ಎಲ್ಲಾ ಪಕ್ಷಗಳು ಎಚ್ಚರಿಕೆಯಿಂದ ಇರಬೇಕು ಎಂದು ಅವರು ತಿಳಿಸಿದ್ದಾರೆ.
ಜಯನಗರ ಕ್ಷೇತ್ರದ ಉದಾಹರಣೆಯನ್ನು ಉಲ್ಲೇಖಿಸಿದ ಡಿಕೆಶಿ, 2023ರ ಚುನಾವಣೆಯಲ್ಲಿ ಮೊದಲಿಗೆ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಗೆದ್ದಿದ್ದಾರೆ ಎಂದು ಘೋಷಣೆ ಮಾಡಲಾಗಿತ್ತು. ಆದರೆ ಬಿಜೆಪಿ ಮರುಎಣಿಕೆ ಬೇಡಿಕೆ ಇಟ್ಟ ಬಳಿಕ ಅಂತಿಮವಾಗಿ ಬಿಜೆಪಿ ಅಭ್ಯರ್ಥಿ ಸಿಕೆ ರಾಮಮೂರ್ತಿ ಕೇವಲ 16 ಮತಗಳಿಂದ ಗೆದ್ದಿದ್ದಾರೆ ಎಂದು ಘೋಷಿಸಲಾಯಿತು. ಈ ಪ್ರಕ್ರಿಯೆಯಲ್ಲಿ ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗಿದೆ ಮತ್ತು ಅಂಚೆ ಮತಗಳಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.
ಶೃಂಗೇರಿ ಮರುಎಣಿಕೆ ಕುರಿತು ಹೊಸಪೇಟೆಯಲ್ಲಿ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಬಿಜೆಪಿ ಇಂತಹ ಕ್ರಮಕ್ಕೆ ಮುಂದಾಗುತ್ತದೆ ಎಂಬುದನ್ನು ಊಹಿಸಿರಲಿಲ್ಲ ಎಂದರು. ಅಧಿಕಾರಿಗಳನ್ನು ದುರುಪಯೋಗ ಮಾಡಲಾಗಿದೆ ಎಂಬ ಅನುಮಾನ ವ್ಯಕ್ತಪಡಿಸಿದ ಅವರು, ಅಂಚೆ ಮತಗಳಲ್ಲಿ ಅಕ್ರಮ ನಡೆದಿದೆ ಎಂದು ಹೇಳಿದ್ದಾರೆ. ಮತ ಎಣಿಕೆಯ ನಂತರ ಏಜೆಂಟ್‌ಗಳಿಂದ ಸಹಿ ಪಡೆದುಕೊಂಡು ಬಳಿಕ ಮತಗಳನ್ನು ತಿದ್ದುಪಡಿ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ವಿಷಯದಲ್ಲಿ ಮೌನವಾಗಿರುವುದಿಲ್ಲ, ಕಾನೂನು ಹೋರಾಟದ ಮೂಲಕ ಮುಂದುವರೆಯುತ್ತೇವೆ ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.