ಭೋಪಾಲ್: ನಿಯಂತ್ರಣ ತಪ್ಪಿ ಡಿವೈಡರ್ ಹಾರಿ ಪಲ್ಟಿಯಾದ ಪಿಕಪ್ ವಾಹನ ಎಸ್‌ಯುವಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ 15 ಮಂದಿ ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದಿದೆ.
ಬುಧವಾರ ರಾತ್ರಿ 10:30ರ ಸುಮಾರಿಗೆ ತಿರ್ಲಾ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಲಿಯಾ ಬೈಪಾಸ್ ಬಳಿಯ ಇಂದೋರ್–ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 46 ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಪಿಕಪ್ ವಾಹನ ಪಲ್ಟಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಪಿಕಪ್‌ನಲ್ಲಿದ್ದ ಕಾರ್ಮಿಕರು ದಿನದ ಕೆಲಸ ಮುಗಿಸಿ ಲೆಬಾದ್ ಪಟ್ಟಣದಿಂದ ತಿರ್ಲಾ ಬಳಿಯ ಸೆಮ್ಲಿಪುರ ಗ್ರಾಮಕ್ಕೆ ವಾಪಸ್ಸಾಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ನಿಯಂತ್ರಣ ತಪ್ಪಿದ ಪಿಕಪ್ ಮೊದಲು ಪಲ್ಟಿಯಾಗಿ, ಬಳಿಕ ಡಿವೈಡರ್ ದಾಟಿ ಎದುರಿನ ಮಾರ್ಗದಲ್ಲಿ ಸಾಗುತ್ತಿದ್ದ ಎಸ್‌ಯುವಿ ಕಾರಿಗೆ ಡಿಕ್ಕಿ ಹೊಡೆದಿದೆ. ಎಸ್‌ಯುವಿ ಪ್ರಯಾಣಿಕರಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.
ಪಿಕಪ್‌ನಲ್ಲಿದ್ದ ಹಲವು ಕಾರ್ಮಿಕರು ವಾಹನದ ಕೆಳಭಾಗದಲ್ಲಿ ಸಿಲುಕಿಕೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಇಂದೋರ್ (ಗ್ರಾಮೀಣ) ಡಿಐಜಿ ಮನೋಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಅಪಘಾತದ ತೀವ್ರತೆ ಹೆಚ್ಚಾಗಿದ್ದು, ರಕ್ಷಣಾ ಕಾರ್ಯಾಚರಣೆ ಕೂಡ ತಕ್ಷಣ ಆರಂಭಿಸಲಾಗಿದೆ.
ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿ, ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ. ಪಿಎಂ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ ₹50,000 ಆರ್ಥಿಕ ನೆರವು ಘೋಷಿಸಲಾಗಿದೆ.
ಇನ್ನು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಕೂಡ ಘಟನೆಯನ್ನು ಕುರಿತು ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ತಲಾ ₹4 ಲಕ್ಷ, ಗಂಭೀರವಾಗಿ ಗಾಯಗೊಂಡವರಿಗೆ ₹1 ಲಕ್ಷ ಹಾಗೂ ಇತರ ಗಾಯಾಳುಗಳಿಗೆ ₹50,000 ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.