ಬೆಂಗಳೂರು: ಬೆಂಗಳೂರಿನ ಆಡುಗೋಡಿಯ ಮುನಿಕೃಷ್ಣಪ್ಪ ಲೇಔಟ್‌ನಲ್ಲಿ ಜಾರ್ಖಂಡ್ ಮೂಲದ 34 ವರ್ಷದ ಯುವತಿಯೊಬ್ಬಳು ವಾಸವಿದ್ದ ಮನೆಯಲ್ಲಿ ನಗ್ನ ಸ್ಥಿತಿಯಲ್ಲಿ ಅರೆಕೊಳೆತ ಮೃತದೇಹವಾಗಿ ಪತ್ತೆಯಾಗಿರುವ ಅನುಮಾನಾಸ್ಪದ ಘಟನೆ ನಡೆದಿದೆ.
ತಾನು ವಾಸವಿದ್ದ ಬಾಡಿಗೆ ಮನೆಯಲ್ಲಿ ಸಾವನ್ನಪ್ಪಿರುವ ಮಹಿಳೆಯನ್ನು ಜಾರ್ಖಂಡ್‌ನ ಧನ್‌ಬಾದ್‌ನ ಹಿರಾಪುರ ಮೂಲದ ಪೂಜಾ ದತ್ತಾ (34) ಎಂದು ಗುರುತಿಸಲಾಗಿದೆ. ಈಕೆ ಈ ಹಿಂದೆ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು, ಆದರೆ ಇತ್ತೀಚೆಗೆ ಕೆಲಸ ತೊರೆದಿದ್ದಳು ಎನ್ನಲಾಗಿದೆ.
ಶವದ ದುರ್ವಾಸನೆಯಿಂದ ಘಟನೆ ಬೆಳಕಿಗೆ ಬಂದಿದೆ. ಮೃತದೇಹ ನಗ್ನ ಹಾಗೂ ಅರೆಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾವಿಗೆ ಕನಿಷ್ಠ 2-3 ದಿನಗಳು ಕಳೆದಿರಬಹುದು ಎಂದು ಶಂಕಿಸಲಾಗಿದೆ. ಶವ ಪತ್ತೆಯಾದ ಪರಿಸ್ಥಿತಿಯಿಂದ ಸಾವು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಅನುಮಾನ ವ್ಯಕ್ತವಾಗಿದೆ. ಈಕೆ ಸುಮಾರು ಮೂರು ವರ್ಷಗಳಿಂದ ಈ ಮನೆಯಲ್ಲಿ ಬಾಡಿಗೆಯಾಗಿದ್ದು, ಹಿಂದೆಯೂ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.
ಏಪ್ರಿಲ್ 27ರಂದು ಅಕ್ಕಪಕ್ಕದ ನಿವಾಸಿಗಳಿಗೆ ಮನೆಯಿಂದ ತೀವ್ರ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಪೊಲೀಸರು ಮನೆ ಬಾಗಿಲು ಬೀಗ ಹಾಕಿದ್ದರಿಂದ ಅದನ್ನು ತೆರೆಯಿಸಿ ಒಳನುಗ್ಗಿದಾಗ ಘಟನೆ ಬಹಿರಂಗವಾಗಿದೆ. ಒಳಗೆ ಯುವತಿಯ ಮೃತದೇಹ ನಗ್ನವಾಗಿ, ರಕ್ತದ ಮಡುವಿನಲ್ಲಿ ಹಾಗೂ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪ್ರಾಥಮಿಕವಾಗಿ ಮೂರು ದಿನಗಳ ಹಿಂದೆಯೇ ಸಾವು ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಮನೆಯಲ್ಲಿ ಶೋಧ ನಡೆಸಿದ ವೇಳೆ, ಕೊಠಡಿ ತುಂಬಾ ಹರಿದು ಹಾಕಿದ ಪೇಪರ್ ತುಂಡುಗಳು ಪತ್ತೆಯಾಗಿವೆ. ಜೊತೆಗೆ, ಕೈ ಮತ್ತು ಕುತ್ತಿಗೆಯಲ್ಲಿ ಗಾಯದ ಗುರುತುಗಳೂ ಕಂಡುಬಂದಿವೆ.
ಮನೆಯ ಮಾಲಕಿ ಜಾನಕಮ್ಮ ಅವರ ಪ್ರಕಾರ, ಯುವತಿ ಕಳೆದ ಮೂರು ವರ್ಷಗಳಿಂದ ಇಲ್ಲಿ ವಾಸವಾಗಿದ್ದು, ಹೆಚ್ಚಿನ ಸಮಯ ಹಿಂದಿಯಲ್ಲಿ ಮಾತನಾಡುತ್ತಿದ್ದಳು. ಆಕೆಯನ್ನು ಭೇಟಿಯಾಗಲು ಒಬ್ಬ ಯುವಕ ಆಗಾಗ ಬರುತ್ತಿದ್ದು, ಇವರಿಬ್ಬರ ನಡುವೆ ಜಗಳ ನಡೆಯುತ್ತಿದ್ದುದಾಗಿ ತಿಳಿಸಿದ್ದಾರೆ. ಆದರೆ ಜಗಳದ ಕಾರಣ ತಿಳಿದಿರಲಿಲ್ಲ. ಕಳೆದ ಗುರುವಾರ ದಿನಸಿ ತರಲು ಕೆಳಗಿಳಿದಿದ್ದುದೇ ಆಕೆಯನ್ನು ನೋಡಿದ ಕೊನೆಯ ಕ್ಷಣ ಎಂದು ಅವರು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಆಡುಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಯುವತಿಯನ್ನು ಭೇಟಿ ಮಾಡುತ್ತಿದ್ದ ಯುವಕ ಯಾರು? ಅವರಿಬ್ಬರ ನಡುವೆ ನಡೆದ ಜಗಳಕ್ಕೆ ಕಾರಣವೇನು? ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಳಿಕ ಸಾವಿನ ನಿಖರ ಕಾರಣ ಬಹಿರಂಗವಾಗುವ ಸಾಧ್ಯತೆ ಇದೆ.