ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ (West Bengal Elections 2026) ಮೊದಲ ಹಂತದ ಮತದಾನ ಇಂದು ನಡೆಯುತ್ತಿದೆ. ಈ ನಡುವೆ ಆತಂಕ ಹುಟ್ಟಿಸುವ ಘಟನೆ ಒಂದು ಬೆಳಕಿಗೆ ಬಂದಿದೆ. ಮತದಾನ ನಡೆಯುತ್ತಿದ್ದ ಮುರ್ಷಿದಾಬಾದ್ ಜಿಲ್ಲೆಯ ನೌಡಾ ಪ್ರದೇಶದಲ್ಲಿ ಕೆಲ ಅಪರಿಚಿತರು ಕಚ್ಚಾ ಬಾಂಬ್ ದಾಳಿ (Crude Bomb Attack) ನಡೆಸಿದ್ದಾರೆ. ಈ ದಾಳಿಯಲ್ಲಿ ಹಲವರು ಗಾಯಗೊಂಡಿದ್ದು, ಸ್ಥಳೀಯರಲ್ಲಿ ಭಯದ ವಾತಾವರಣ ಉಂಟಾಗಿದೆ.
ಕಚ್ಚಾ ಬಾಂಬ್ ದಾಳಿಯ ನಂತರ ಹಿಂಸಾಚಾರದಿಂದ ಬಳಲುತ್ತಿರುವ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಭದ್ರತೆಯನ್ನು ಕಟ್ಟುನಿಟ್ಟುಗೊಳಿಸಲಾಗಿದೆ. ಕಳೆದ ತಿಂಗಳಲ್ಲಿ ಜಂಗಿಪುರ ಮತ್ತು ರಘುನಾಥಗಂಜ್ ಪ್ರದೇಶಗಳಲ್ಲಿ ಎರಡು ಗುಂಪುಗಳ ನಡುವೆ ಉಂಟಾದ ಘರ್ಷಣೆ ತೀವ್ರಗೊಂಡಿತ್ತು. ಈ ಹಿನ್ನೆಲೆ ನಿಷೇಧಾಜ್ಞೆ ಜಾರಿಗೊಳಿಸಿ 30 ಮಂದಿಯನ್ನು ಬಂಧಿಸಲಾಗಿತ್ತು. ಆಗಿನಿಂದಲೇ ಕೇಂದ್ರ ಪಡೆಗಳು ಪರಿಸ್ಥಿತಿಯನ್ನು ನಿಯಂತ್ರಣದಲ್ಲಿ ಇಡುವ ಕೆಲಸ ಮಾಡುತ್ತಿವೆ.
ಮೊದಲ ಹಂತದ ಚುನಾವಣೆ
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು ಆರಂಭವಾಗಿದೆ. ಉತ್ತರ ಬಂಗಾಳದ 152 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಮುರ್ಷಿದಾಬಾದ್, ಜಾರ್ಗ್ರಾಮ್, ಮೇದಿನಿಪುರ, ಬಂಕುರಾ, ಪುರುಲಿಯಾ, ಪಶ್ಚಿಮ ಬರ್ಧಮಾನ್ ಮತ್ತು ಬಿರ್ಬುಮ್ ಜಿಲ್ಲೆಗಳು ಮೊದಲ ಹಂತದಲ್ಲಿ ಒಳಗೊಂಡಿವೆ. ಒಟ್ಟು 16 ಜಿಲ್ಲೆಗಳ 152 ಕ್ಷೇತ್ರಗಳಲ್ಲಿ 1,478 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಹೆಚ್ಚುವರಿಯಾಗಿ 4,660 ಸಹಾಯಕ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಒಟ್ಟು ಮತಗಟ್ಟೆಗಳ ಪೈಕಿ 8,000 ಕ್ಕೂ ಹೆಚ್ಚು ಮತಗಟ್ಟೆಗಳನ್ನು ಅತಿಸೂಕ್ಷ್ಮವೆಂದು ಗುರುತಿಸಲಾಗಿದೆ. ರಾಜ್ಯದಾದ್ಯಂತ 780 ಕ್ಕೂ ಹೆಚ್ಚು ಕೇಂದ್ರ ಭದ್ರತಾ ಪಡೆಗಳ ಕಂಪನಿಗಳನ್ನು ನಿಯೋಜಿಸಲಾಗಿದೆ. ಮತದಾನಕ್ಕೂ ಮುನ್ನವೇ 199 ಕ್ಕೂ ಹೆಚ್ಚು ಗೂಂಡಾಗಳನ್ನು ಬಂಧಿಸಲಾಗಿದೆ.