ಮಂಡ್ಯ: ಭ್ರೂಣಲಿಂಗ ಪತ್ತೆಗಾಗಿ ಬಾಲ ಗರ್ಭಿಣಿಯರಿಗೆ ಸ್ಕ್ಯಾನಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲೆ ಕೆಆರ್ ಪೇಟೆ ಪೊಲೀಸರು ಮೂವರು ವೈದ್ಯರನ್ನು ಬಂಧಿಸಿದ್ದಾರೆ.
ಕಾನೂನುಬಾಹಿರವಾಗಿ ಸ್ಕ್ಯಾನಿಂಗ್ ಮಾಡಿದ ಮೂವರು ವೈದ್ಯರನ್ನು ಬಂಧಿಸಲಾಗಿದೆ. ಕೆಆರ್ ಪೇಟೆಯ ಚೇತನ ಮೆಟರ್ನಿಟಿ ಸೆಂಟರ್ ನ ಡಾ. ದಿವ್ಯಾ ಚೇತನ ಮತ್ತು ಕೆಆರ್ ಪೇಟೆಯ ನಾವಿ ಡಯಾಗ್ನೋಸ್ಟಿಕ್ ಸೆಂಟರ್ ನ ಡಾ. ಹರ್ಷಿತ್ ಹಾಗೂ ಕುಶಾಲ ಡೈಯಾಗ್ನೋಸ್ಟಿಕ್ ಸೆಂಟರ್ ನ ಡಾ. ಹರೀಶ್ ಬಂಧಿತರು. ತಲೆಮರೆಸಿಕೊಂಡ ಸ್ತ್ರೀರೋಗ ತಜ್ಞೆ ಪ್ರಿಯಾಂಕಾಗೆ ಪೊಲೀಸರು ಶೋಧ ಕೈಗೊಂಡಿದ್ದಾರೆ.
ಕೆಆರ್ ಪೇಟೆ ಪಟ್ಟಣ ಮತ್ತು ಗ್ರಾಮಾಂತರ ಠಾಣೆಯಲ್ಲಿ ಪ್ರತ್ಯೇಕವಾಗಿ 12 ಕೇಸ್ ದಾಖಲಿಸಲಾಗಿದೆ. 17 ಆರೋಪಿಗಳ ವಿರುದ್ಧ ಒಟ್ಟು 12 ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ. ಸರ್ಕಾರಿ ವೈದ್ಯೆ, ಮೂವರು ಖಾಸಗಿ ವೈದ್ಯರು, ಆಶಾ ಕಾರ್ಯಕರ್ತೆ, ಕಿರಿಯ ಆರೋಗ್ಯ ಸಹಾಯಕರು ಮತ್ತು ಖಾಸಗಿ ವ್ಯಕ್ತಿಗಳ ವಿರುದ್ಧ ಕೇಸ್ ದಾಖಲಾಗಿದೆ.
ಸ್ವಯಂಪ್ರೇರಿತ ಕೇಸು ದಾಖಲಿಸಿದ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಕೆಆರ್ ಪೇಟೆಯ ಎರಡು ಡಯಾಗ್ನೋಸ್ಟಿಕ್ ಸೆಂಟರ್ ನಲ್ಲಿ ಭ್ರೂಣಲಿಂಗ ಪತ್ತೆಯಾಗಿತ್ತು. ನಾವಿ ಡಯಾಗ್ನೋಸ್ಟಿಕ್ ಸೆಂಟರ್ ನಲ್ಲಿ ಒಟ್ಟು 24 ಜನರಿಗೆ ಸ್ಕ್ಯಾನಿಂಗ್ ಮಾಡಲಾಗಿತ್ತು. ಐವರು ಬಾಲಗರ್ಭಿಣಿಯರಿಗೆ ಸ್ಕ್ಯಾನಿಂಗ್ ಮಾಡಲಾಗಿತ್ತು. ಕುಶಾಲ ಡಯಾಗ್ನೋಸ್ಟಿಕ್ ಸೆಂಟರ್ ನಲ್ಲಿ ಏಳು ಮಂದಿಗೆ ಸ್ಕ್ಯಾನಿಂಗ್ ಮಾಡಿದ ಆರೋಪ ಕೇಳಿ ಬಂದಿದೆ. ಸದ್ಯ ಮೂವರನ್ನು ಬಂಧಿಸಿ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.