ಮಂಡ್ಯ : ಜಿಲ್ಲೆಯ ಕೆ.ಆರ್. ಪೇಟೆಯಲ್ಲಿ ಅಕ್ರಮವಾಗಿ ಭ್ರೂಣಲಿಂಗ ಪತ್ತೆ ಮಾಡುತ್ತಿದ್ದ ಜಾಲವನ್ನು ಪೊಲೀಸರು ಪತ್ತೆಹಚ್ಚಿದ್ದು, ಈ ಸಂಬಂಧ ಮೂವರು ವೈದ್ಯರನ್ನು ಬಂಧಿಸಿದ್ದಾರೆ.
ಕೆ.ಆರ್. ಪೇಟೆಯ ಚೇತನ ಮೆಟರ್ನಿಟಿ ಸೆಂಟರ್‌ನ ದಿವ್ಯ ಚೇತನ್, ನಾವಿ ಡಯಾಗ್ನಾಸ್ಟಿಕ್ ಸೆಂಟರ್‌ನ ಹರ್ಷಿತ್, ಮತ್ತು ಕುಶಲ್ ಡಯಾಗ್ನಾಸ್ಟಿಕ್ ಸೆಂಟರ್‌ನ ಹರೀಶ್ ಅವರನ್ನು ಬಂಧಿಸಲಾಗಿದೆ. ಸ್ತ್ರೀರೋಗ ತಜ್ಞೆ ಪ್ರಿಯಾಂಕಾ ಎಂಬುವವರು ತಲೆಮರೆಸಿಕೊಂಡಿದ್ದು, ಪೊಲೀಸರು ಅವರಿಗಾಗಿ ಶೋಧ ನಡೆಸುತ್ತಿದ್ದಾರೆ.
ಗಂಭೀರ ಆರೋಪ : ಸುಮಾರು 31ಕ್ಕೂ ಹೆಚ್ಚು ಅಪ್ರಾಪ್ತ (ಬಾಲ) ಗರ್ಭಿಣಿಯರಿಗೆ ಕಾನೂನುಬಾಹಿರವಾಗಿ ಭ್ರೂಣಲಿಂಗ ಪತ್ತೆಗಾಗಿ ಸ್ಕ್ಯಾನಿಂಗ್ ಮಾಡಿದ ಗಂಭೀರ ಆರೋಪ ಇವರ ಮೇಲಿದೆ.
ಪೋಕ್ಸೋ ಕಾಯ್ದೆ ಉಲ್ಲಂಘನೆ : ಅಪ್ರಾಪ್ತ ಹೆಣ್ಣುಮಕ್ಕಳು ಗರ್ಭಿಣಿಯರಾಗಿ ಬಂದಾಗ ನಿಯಮದಂತೆ ಪೊಲೀಸರಿಗೆ ಮಾಹಿತಿ ನೀಡಬೇಕಿತ್ತು. ಆದರೆ ವೈದ್ಯರು ಹಣದ ಆಸೆಗಾಗಿ ಈ ವಿಷಯವನ್ನು ಮುಚ್ಚಿಟ್ಟಿದ್ದರು.ಉಪಲೋಕಾಯುಕ್ತರ ಆದೇಶದಂತೆ ಮಂಡ್ಯ, ಮೈಸೂರು ಮತ್ತು ರಾಮನಗರದ ಲೋಕಾಯುಕ್ತ ಪೊಲೀಸರು ಜಂಟಿಯಾಗಿ ದಾಳಿ ನಡೆಸಿದಾಗ ಈ ದಂಧೆ ಬೆಳಕಿಗೆ ಬಂದಿದೆ.
ದಾಖಲೆಗಳ ನಾಶ: ತನಿಖೆಯ ವೇಳೆ ‘ಕುಶಲ್ ಡಯಾಗ್ನಾಸ್ಟಿಕ್ ಸೆಂಟರ್’ನಲ್ಲಿ ಸಾವಿರಾರು ಸ್ಕ್ಯಾನಿಂಗ್ ವರದಿಗಳ ದಾಖಲೆಗಳನ್ನು ಉದ್ದೇಶಪೂರ್ವಕವಾಗಿ ಅಳಿಸಿರುವುದು ಪತ್ತೆಯಾಗಿದೆ. ಈ ಸಂಬಂಧ ಕೆ.ಆರ್. ಪೇಟೆ ಪಟ್ಟಣ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಒಟ್ಟು 12 ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿದ್ದು, ಸರ್ಕಾರಿ ವೈದ್ಯರು, ಆಶಾ ಕಾರ್ಯಕರ್ತೆಯರು ಮತ್ತು ಖಾಸಗಿ ವ್ಯಕ್ತಿಗಳೂ ಸೇರಿದಂತೆ ಹಲವರ ವಿರುದ್ಧ ತನಿಖೆ ಮುಂದುವರಿದಿದೆ.